ಮಂಡ್ಯ: ಸರ್ಕಾರದ ವಿರುದ್ಧ ಕೇಳಿಬಂದ 40% ಕಮಿಷನ್ ದಂಧೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗಲೇ ಸಂಸದೆ ಸುಮಲತಾ ಮಂಡ್ಯದಲ್ಲಿ ಶಾಕಿಂಗ್ ಎನಿಸುವ ಆರೋಪ ಮಾಡಿದ್ದಾರೆ.
ಮಂಡ್ಯದಲ್ಲಿ ಕಮಿಷನ್ ದಂಧೆ ಇದೆ. ಟೆಂಡರ್ ಗಳು ಆಗುತ್ತಿದ್ದಂತೆ ಸ್ಥಳೀಯ ಜನಪ್ರತಿಗಳು ಕಮಿಷನ್ ಕೇಳುತ್ತಾರೆ ಎಂಬ ಆರೋಪ ಮಾಡಿದ್ದಾರೆ. ಮಂಡ್ಯದ ರಸ್ತೆ ಕರಡಿಕೊಪ್ಪಲು – ಬಿಳಿದೇಗುಲದ ರಸ್ತೆಯ ಕೋಟಿ ಕೋಟಿ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು ಮೂರುವರೆ ತಿಂಗಳಿಗೇನೆ ಕಿತ್ತು ಹೋಗಿದೆ. ಈ ಬಗ್ಗೆ ಉತ್ತರಿಸಿದ ಸುಮಲತಾ, ಮಂಡ್ಯದಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ. 100ಕ್ಕೆ 500ರಷ್ಟು ಕಮಿಷನ್ ದಂಧೆ ಇದೆ. ಹೀಗಾಗಿ ಕ್ವಾಲಿಟಿ ಕೆಲಸಗಳು ನಡೆಯುತ್ತಿಲ್ಲ ಎಂದಿದ್ದಾರೆ.
ನಮ್ಮಲ್ಲಿ ವಿಶ್ವಮಟ್ಟದ ಎಂಜಿನಿಯರ್ ಇದ್ದರು ಕಳಪೆಮಟ್ಟದ ಕಾಮಗಾರಿ ನಡೆಯುತ್ತಿದೆ. ಇದಕ್ಕೆಲ್ಲಾ ಕಮಿಷನ್ ದಂಧೆಯೆ ಕಾರಣ. ಕೇಂದ್ರದ ಯೋಜನೆಗೂ ಜನಪ್ರತಿನಿಧಿಗಳು ಕಮಿಷನ್ ತೆಗೆದುಕೊಳ್ಳುತ್ತಾರೆ. ಈ ಸಂಬಂಧ ನಾನು ಪತ್ರ ಬರೆಯುತ್ತೇನೆ. ಕಮಿಷನ್ ಬಗ್ಗೆ ಮಾಧ್ಯಮದವರು ತೋರಿಸಬೇಕು ಎಂದಿದ್ದಾರೆ.