ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಟಿಕೆಟ್ ಕೈತಪ್ಪಿದ ಹಿನ್ನೆಲೆ ರಾಜಕೀಯ ಚಟುವಟಿಕೆಯಿಂದ ಸುಮಲತಾ ಕೊಂಚ ದೂರವೇ ಸರಿದಿದ್ದಾರೆ. ಇದೀಗ ಮತ್ತೆ ಅದೇ ಮಂಡ್ಯದ ರಾಜಕೀಯದಲ್ಲಿ ಸಕ್ರಿಯವಾಗುವ ಮಾತುಗಳನ್ನಾಡಿದ್ದಾರೆ ಸುಮಲತಾ.
ಲೋಕಸಭಾ ಚುನಾವಣೆಯ ಬಳಿಕ ಗ್ಯಾಪ್ ಪಡೆದು ವಿಶ್ರಾಂತಿ ಮಾಡಿದ್ದೇನೆ. ಹೊಸ ವರ್ಷಕ್ಕೆ ಅಂದ್ರೆ ಜನವರಿಯಿಂದ ಮತ್ತೆ ಪಕ್ಷ ಸಂಘಟನೆ ಮಾಡುತ್ತೇನೆ. ನನ್ನ ರಾಜಕಾರಣ ಎಂದಿಗೂ ಮಂಡ್ಯದಲ್ಲಿಯೇ. ಐದು ವರ್ಷದಲ್ಲಿ ನನಗೆ ಅಂತ ಸಮಯವಿರಲಿಲ್ಲ. ಇನ್ಮೇಲೆ ಮಂಡ್ಯದಲ್ಲಿ ಓಡಾಡುತ್ತೇನೆ. ನನಗೆ ಒಂದು ರೆಸ್ಟ್ ಬೇಕಿತ್ತು. ಸಾಕಷ್ಟು ಹಳ್ಳಿಗಳಿಗೆ ಹೋಗಿದ್ದೆ. ಪ್ರಧಾನಿ ಮೋದಿ ಅವರ ಮಾತಿಗೆ ಬೆಲೆ ಕೊಟ್ಟು ಮಂಡ್ಯದಲ್ಲಿ ಓಡಾಡಿದೆ. ಜನವರಿಯಿಂದ ಮಂಡ್ಯದಲ್ಲಿ ಸಕ್ರಿಯವಾಗುತ್ತೇನೆ. ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ನನ್ನನ್ನು ಕರೆಯದೆ ಇರುವ ಕಡೆಗೆ ನಾನು ಅಷ್ಟಾಗಿ ಗಮನ ಕೊಟ್ಟಿಲ್ಲ. ಹೀಗಾಗಿ ಸೈಡ್ ಲೈನ್ ಅಂತ ಅಲ್ಲ. ನನ್ನ ಅಗತ್ಯ ಎಲ್ಲಿದೆ ಅಂತ ಅನ್ನಿಸುತ್ತೋ ಅಲ್ಲಿಗೆ ಕರೀತಾರೆ ಎಂದಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಪ್ರಚಾರಕ್ಕೆಂದು ಯಾರು ಕರೆದಿಲ್ಲ. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದಿದ್ದರೆ ಕರೆಯುತ್ತಿದ್ದರು ಎನಿಸುತ್ತದೆ. ಆದರೆ ಮೈತ್ರಿ ಅಭ್ಯರ್ಥಿ ನಿಂತಿರುವ ಕಾರಣ ಮಂಡ್ಯ ಚುನಾವಣೆ ಗಮನದಲ್ಲಿಟ್ಟುಕೊಂಡು ಕರೆದಿಲ್ಲ. ಮಂಡ್ಯದಲ್ಲಿ ಪಕ್ಷ ಬಲಪಡಿಸಬೇಕೆಂದು ಹೈಕಮಾಂಡ್ ಗೆ ಈಗಾಗಲೇ ಹೇಳಿದ್ದೇನೆ. ಹೆಚ್ಚು ಸಕ್ರಿಯವಾಗಿ ಇಲ್ಲ, ನನ್ನ ಅಸಮಾಧಾನವನ್ನು ತಿಳಿಸಿದ್ದೇನೆ. ಮೈತ್ರಿ ಇದ್ದಾಗ ಪಕ್ಷ ಸಂಘಟಬೆ ಮಾಡುವುದು ಒಂದು ಸವಾಲಿನ ಕೆಲಸವೇ ಸರಿ. ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಿಲ್ಲ. ಬೆಂಬಲಿಗರು ಆಸೆ ಪಡುವುದರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ.