ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿದೆ. ಹೀಗಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದೆ. ಇದು ಸುಮಲತಾ ಅವರ ಸ್ಪರ್ಧೆಗೆ ಹಿಂದೇಟು ಹಾಕಿತ್ತು. ಸುಮಲತಾ ಈ ಬಾರಿಯೂ ಸ್ವತಂತ್ರವಾಗಿಯೇ ಸ್ಪರ್ಧಿಸಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಅದಕ್ಕೆ ಟ್ವಿಸ್ಟ್ ಎಂಬಂತೆ ಇಂದು ನಿರ್ಧಾರ ತಿಳಿಸುವುದಾಗಿ ಹೇಳಿದ್ದರು. ದರ್ಶನ್ ಕೂಡ ಜೊತೆಗೆ ಇರಲಿದ್ದಾರೆ ಎಂದಿದ್ದರು. ಇದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಇಂದಿನ ಸುದ್ದಿಗೋಷ್ಠಿಯಲ್ಲಿ ತಾನೂ ಸ್ಪರ್ಧಿಸುತ್ತಿಲ್ಲ ಎಂಬುದನ್ನು ಕನ್ಫರ್ಮ್ ಮಾಡಿದ್ದಾರೆ.
ಇಂದು ಬೆಳಗ್ಗೆಯೇ ದರ್ಶನ್ ಹಾಗೂ ಪುತ್ರ ಅಭಿಷೇಕ್ ಅಂಬರೀಶ್ ಜೊತೆಗೆ ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ತಮ್ಮ ನಿರ್ಧಾರ ತಿಳಿಸಿದ್ದಾರೆ. ನಾನು ಈ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರುತ್ತೇನೆ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ಐದು ವರ್ಷಗಳ ಹಿಂದೆ ನನಗೆ ಐತಿಹಾಸಿಕ ಗೆಲುವು ನೀಡಿದ್ರಿ. ಐದು ವರ್ಷಗಳ ಕಾಲ ನನ್ನ ಜೊತೆಗೆ ನಿಂತ ನಿಮ್ಮೆಲ್ಲರಿಗೂ ಧನ್ಯವಾದಗಳು. ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ನಾನು ನಿಂತಿದ್ದೇನೆ. ಜಿಲ್ಲೆಯನ್ನು ಅಭಿವೃದ್ಧಿ ಮಾಡುವುದಷ್ಟೇ ನನ್ನ ಮನಸ್ಸಲ್ಲಿ ಇದ್ದದ್ದು.
2019ರಲ್ಲಿ ಬೇರೆಯದ್ದೇ ರೀತಿಯ ಸವಾಲಾಗಿತ್ತು. ಈಗಿನ ಪರಿಸ್ಥಿತಿ ಬೇರೆಯದ್ದೇ ರೀತಿಯ ಸವಾಲಾಗಿದೆ. ಕೊನೆಗಳಿಗೆಯವರೆಗೂ ಬಿಜೆಪಿ ಟಿಕೆಟ್ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ ನಿಂತುಕೊಳ್ಳಲು ಹೇಳಿದರು. ಬೇರೆ ಬೇರೆ ಕ್ಷೇತ್ರದ ಆಫರ್ ನೀಡಿದರು. ಸೋತರು ಗೆದ್ದರು ಅದು ಮಂಡ್ಯದಲ್ಲಿಯೇ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ಈ ಬಾರಿ ಚುನಾವಣೆಗೆ ನಿಲ್ಲಲ್ಲ. ಆದರೆ ಮಂಡ್ಯ ಬಿಡಲ್ಲ ಎಂದೇ ಶಪತ ಮಾಡಿದ್ದಾರೆ.