ಚಿತ್ರದುರ್ಗ,(ಅಕ್ಟೋಬರ್.03) : ರಾಷ್ಟ್ರಾದ್ಯಂತ ಸೆ.15 ರಿಂದ ಅ.2ರವರೆಗೆ ಜರುಗಿದ ಸ್ವಚ್ಛ ಹೀ ಸೇವಾ ಅಭಿಯಾನದಲ್ಲಿ, ಕರ್ನಾಟಕ ರಾಜ್ಯ ಪ್ರಥಮ ಸ್ಥಾನಗಳಿಸಿದೆ.
ಗ್ರಾಮೀಣ ಭಾಗದ ಜನರಲ್ಲಿ 15 ದಿನಗಳ ಕಾಲ ನೈರ್ಮಲ್ಯ ಹಾಗೂ ಸ್ವಚ್ಛತೆ ಬಗ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ನೈರ್ಮಲ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯಗಳು ಕೈಗೊಂಡ ಚಟುವಟಿಕೆಗಳ ಕುರಿತು ಕೇಂದ್ರ ಸರ್ಕಾರ ಪ್ರತಿದಿನ ವರದಿ ಪಡೆದುಕೊಂಡು, ಮೌಲ್ಯಮಾಪನ ನಡೆಸಿ ಪ್ರಶಸ್ತಿಯನ್ನು ಘೋಷಿಸಿದೆ.
ಅಕ್ಟೋಬರ್ 2 ರಂದು ದೆಹಲಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಪ್ರಶಸ್ತಿ ಪ್ರಧಾನ ಮಾಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸರ್ಕಾರ ಅಪರ ಕಾರ್ಯದರ್ಶಿ ಎಲ್.ಕೆ.ಅತೀಕ್ ಪ್ರಶಸ್ತಿ ಸ್ವೀಕರಿಸಿದರು.
ಸುಜಲಾಂ 2.0 ಅನುಷ್ಠಾನ : ಚಿತ್ರದುರ್ಗ ಜಿ.ಪಂ.ಗೆ ಪ್ರಶಂಸೆ
ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಘನ, ದ್ರವ ತ್ಯಾಜ್ಯ ನಿರ್ವಹಣೆ, ಶೌಚಾಲಯಗಳ ಬಳಕೆಯ ಕುರಿತು ಜಾಗೃತಿ, ಸುಜಲಾಂ 2.0 ಅಡಿ ಇಂಗು ಗುಂಡಿಗಳ ನಿರ್ಮಾಣದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಚಿತ್ರದುರ್ಗ ಜಿ.ಪಂ.ಗೆ ಕೇಂದ್ರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಜಲಶಕ್ತಿ ಮಂತ್ರಾಲಯ ಪ್ರಶಂಸೆ ವ್ಯಕ್ತಪಡಿಸಿದೆ.
ಈ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯದ 30 ಜಿಲ್ಲೆಗಳ ಪೈಕಿ ಚಿತ್ರದುರ್ಗ, ಕೊಡಗು, ಹಾವೇರಿ ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತಿಗಳು ಪ್ರಶಂಸೆಗೆ ಪಾತ್ರವಾಗಿವೆ. ಚಿತ್ರದುರ್ಗ ಜಿ.ಪಂ. ಪರವಾಗಿ ಮುಖ್ಯ ಯೋಜನಾ ನಿರ್ದೇಶಕ ಕೆ.ಎಸ್.ಮಹಂತೇಶಪ್ಪ ಪ್ರಶಂಸನಾ ಪತ್ರವನ್ನು ಸ್ವೀಕರಿಸಿದ್ದಾರೆ.