ದಕ್ಷಿಣ ಕನ್ನಡ: ಧರ್ನಸ್ಥಳದಲ್ಲಿ ತಲೆ ಬುರುಡೆ ಕೇಸ್ ಗಳ ವಿಚಾರ ನಡೆಯುತ್ತಿರುವಾಗಲೇ ಸದ್ದು ಮಾಡಿದ್ದು ಸುಜಾತ ಭಟ್ ವಿಚಾರ. ನನ್ನ ಮಗಳು ನಾಪತ್ತೆಯಾಗಿದ್ದಾಳೆ ಹುಡುಕಿ ಕೊಡಿ ಎಂದು ಎಸ್ಐಟಿ ಮುಂದೆ ಬಂದು ನಿಂತರು. ಅದು ಎಲ್ಲೆಲ್ಲೋ ಹೋಗಿ, ಇನ್ನೆಲ್ಲಿಗೋ ಬಂದು ನಿಂತಿತು. ಕಡೆಗೆ ಅನನ್ಯಾ ಭಟ್ ಎಂಬಾಕೆಯೇ ಹುಟ್ಟಿಲ್ಲ, ಇದೊಂದು ಕಟ್ಟು ಕಥೆ ಎಂಬೆಲ್ಲಾ ಚರ್ಚೆಗಳು ಶುರುವಾಯ್ತು. ಎಸ್ಐಟಿ ಅಧಿಕಾರಿಗಳು ಸದ್ಯ ಸುಜಾತ ಭಟ್ ನ ಈ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇಂದು ಎಸ್ಐಟಿ ಮುಂದೆ ಪ್ರಭಾವಿ ನಾಯಕರ ಹೆಸರನ್ನು ಹೇಳಿದ್ದಾರೆ ಎನ್ನಲಾಗಿದೆ ಸುಜಾತ ಭಟ್. ನನ್ನ ಮಗಳು 20 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು ಎಂದು ದೂರು ನೀಡಿದ್ದ ಸುಜಾತ ಭಟ್ ಇಂದಿನ ತನಿಖೆಯಲ್ಲಿ, ತನ್ನ ಸುತ್ತ ಹೆಣೆದ ವ್ಯೂಹದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅನನ್ಯಾ ಭಟ್ ಮಿಸ್ಸಿಂಗ್ ಕೇಸ್ ಸುಳ್ಳು ಅನ್ನೋದು ಗೊತ್ತಾಗುತ್ತಿದ್ದಂತೆ ಸುಜಾತ ಭಟ್ ಏಕಾಂಗಿಯಾಗಿದ್ದಾರೆ.
ತನಿಖಾಧಿಕಾರಿ ಎಸ್ಐ ಗುಣಪಾಲ್ ಮತ್ತು ದಯಾಮರಿಂದ ಸುಜಾತ ಭಟ್ ವಿಚಾರಣೆ ನಡೆದಿದೆ. ಈ ವೇಳೆ ಪ್ರಭಾವಿಗಳ ಕೈವಾಡವಿದೆ ಎಂದು ಸುಜಾತ ಭಟ್ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಆ ಪ್ರಭಾವಿಗಳು ಯಾರು ಎಂಬ ಮಾಹಿತಿ ಎಲ್ಲಿಯೂ ಲೀಕ್ ಆಗಿಲ್ಲ. ಸದ್ಯ ಸುಜಾತ ಭಟ್ ತನಿಖೆಯನ್ನು ಮುಗಿಸಿಕೊಂಡು ಹೊರಟಿದ್ದಾರೆ. ತನ್ನ ಮಗಳು ನಾಪತ್ತೆಯಾಗಿದ್ದಾಳೆ. ಅಸ್ತಿಯನ್ನಾದರೂ ಹುಡುಕಿಕೊಡಿ ಎಂದಿದ್ದ ಸುಜಾತ ಭಟ್ ಬಳಿಕ ಆಕೆ ನನ್ನ ಮಗಳೇ ಅಲ್ಲ ಎಂದಿದ್ದರು. ಬೆಳವಣಿಗೆ ವಿಚಿತ್ರವಾಗಿ ನಡೆದಾಗ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು.
