ಚಿತ್ರದುರ್ಗ ಡಿ. 22 : ಪ್ರಸವಪೂರ್ವ ಮತ್ತು ಗರ್ಭಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ (ಪಿಸಿ & ಪಿಎನ್‍ಡಿಟಿ) ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಮಿತಿಯು ಪಿಸಿ&ಪಿಎನ್‍ಡಿಟಿ ತಂಡದೊಂದಿಗೆ ಜಿಲ್ಲೆಯ ವಿವಿಧೆಡೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು, ಅಲ್ಲದೆ ಅಲ್ಲಿ ಕಂಡುಬಂದ ಕೆಲವು ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸೂಚನೆ ನೀಡಿತು.
ಪಿಸಿ&ಪಿಎನ್‍ಡಿಟಿ ಕಾಯ್ದೆ ಅನುಷ್ಠಾನ ಸಂಬಂಧ ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್ ಹಾಗೂ ಸಮಿತಿಯ ಸದಸ್ಯರಾದ ಡಾ. ಸತ್ಯನಾರಾಯಣ ಅವರು ಚಿತ್ರದುರ್ಗ ನಗರದ ಗುರು ಕೊಟ್ಟೂರೇಶ್ವರ ಸ್ಕ್ಯಾನಿಂಗ್ ಸೆಂಟರ್ ಮತ್ತು ಖುಷಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ, ಇದುವರೆಗೂ ಸ್ಕ್ಯಾನಿಂಗ್ ಮಾಡಿರುವ ಪ್ರಕರಣಗಳ ಬಗ್ಗೆ ದಾಖಲಾತಿ ಮತ್ತು ವಹಿ, ಎಂ.ಟಿ.ಪಿ. ದಾಖಲಾತಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.
ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಕಾಯ್ದೆಯನುಸಾರ “ಭ್ರೂಣ ಲಿಂಗವನ್ನು ಬಹಿರಂಗ ಪಡಿಸುವುದು ಕಾನೂನಿನ ಮೇರೆಗೆ ನಿಷೇಧಿಸಲಾಗಿದೆ” ಎಂಬುದಾಗಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸೂಚನೆಯುಳ್ಳ ಫಲಕವನ್ನು ಸಾರ್ವಜನಿಕರ ಮಾಹಿತಿಗಾಗಿ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಸ್ಕ್ಯಾನಿಂಗ್ ಮಾಡಲಾಗುವ ಕೊಠಡಿ ಒಳಗೆ ಚಿಕಿತ್ಸಾ ದರ ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು, ನೊಂದಣಿ ರಿಜಿಸ್ಟರ್ ಮತ್ತು ಶಿಫಾರಸು ಚೀಟಿಗಳನ್ನು ಸಮರ್ಪಕವಾಗಿ ದಾಖಲಿಸಿ ನಿರ್ವಹಿಸಬೇಕು. ಪಿಸಿ & ಪಿಎನ್‍ಡಿಟಿ ಕಾಯ್ದೆ 1994 ಮತ್ತು ತಿದ್ದುಪಡಿಗಳ ಕಾಯ್ದೆ ಪುಸ್ತಕವನ್ನು ಸೆಂಟರ್‍ನಲ್ಲಿ ಇಡಬೇಕು. ಎಂದು ಸೂಚನೆ ನೀಡಿದರು.
ಹೊಸದುರ್ಗದ ವಿನಾಯಕ ಸ್ಕ್ಯಾನಿಂಗ್ ಸೆಂಟರ್, ವಿನಾಯಕ ಹಾಸ್ಪಿಟಲ್, ಮಾರುತಿ ನರ್ಸಿಂಗ್ ಹೋಂ, ಶಾರದ ನಸಿಂಗ್ ಹೋಂ ಗಳಿಗೆ ದಿಢೀರ್ ಭೇಟಿ ನೀಡಿದ ಸಮಿತಿಯ ತಂಡವು, ಇಲ್ಲಿಯೂ ಕಂಡ ಕೆಲವು ನ್ಯೂನತೆಗಳನ್ನು ಸರಿಪಡಿಸಲು ಸೂಚನೆ ನೀಡಿತು. ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ 1994 ಮತ್ತುತಿದ್ದುಪಡಿಗಳ ಕಾಯ್ದೆ ಪುಸ್ತಕವನ್ನು ಇಡುವುದು, ಮಾಹಿತಿ ಫಲಕ ಅಳವಡಿಸುವುದು, ಸ್ಕ್ಯಾನಿಂಗ್‍ಗೆ ಸಂಬಂಧಿಸಿದ ಸಂಪೂರ್ನ ಮಾಹಿತಿ ಇಟ್ಟುಕೊಳ್ಳುವುದು, ಪ್ರಸೂತಿ ಮತ್ತು ಹೆರಿಗೆ ತಜ್ಞರ ಭೇಟಿ ಸಮಯವನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸುವುದು, ಎಂ.ಟಿ.ಪಿ. ಗೆ ಸಂಬಂಧಿಸಿದ ಎಲ್ಲ ದಾಖಲಾತಿಯನ್ನು ಇರಿಸುವಂತೆ ನಿರ್ದೇಶನ ನೀಡಿತು.
ಬರುವ ದಿನಗಳಲ್ಲಿ ಸಮಿತಿಯು ನಿಯಮಾನುಸಾರ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಸ್ಕ್ಯಾನಿಂಗ್ ಸೆಂಟರ್‍ಗಳು ಪಿಸಿ & ಪಿಎನ್‍ಡಿಟಿ ಕಾಯ್ದೆಯಲ್ಲಿನ ಎಲ್ಲ ಅಂಶಗಳನ್ನು ಚಾಚುತಪ್ಪದೆ ಪಾಲಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು.