ಚಿತ್ರದುರ್ಗ, (ನ.13) : ಬಸವೇಶ್ವರ ಆಸ್ಪತ್ರೆಯಲ್ಲಿ ಬ್ರೈನ್ ಟ್ಯೂಮರ್‍ಗೆ ಯಶಸ್ವಿಯಾಗಿ ಎಂಡೋಸ್ಕೋಪಿಕ್ ಸರ್ಜರಿಯನ್ನು ನ.07 ರಂದು ಮಾಡಲಾಯಿತು ಎಂದು ನರರೋಗ ಸರ್ಜನ್ ಡಾ. ಕಿರಣ್ ಹೇಳಿದರು.
ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ವಿಶೇಷ ಪ್ರಕರಣ. ತಲೆಸುತ್ತು ಎಂದು ಆಸ್ಪತ್ರೆಗೆ ಬಂದಿದ್ದ ಚಳ್ಳಕೆರೆ ತಾಲ್ಲೂಕಿನ ಪಾಲಮ್ಮ(45ವರ್ಷ) ಎಂಬ ಮಹಿಳೆ ಡೆಂಗ್ಯು ಜ್ವರದಿಂದ ಪ್ಲೆಟ್‍ಲೆಟ್ ಕೌಂಟ್ ನೋಡಿದಾಗ 15 ಸಾವಿರ ಇತ್ತು. ಅದು ಜಾಸ್ತಿಯಾದಾಗ ಎಂ.ಆರ್.ಐ. ಸ್ಕ್ಯಾನ್ ಮಾಡಿ ನೋಡಿದಾಗ ಅವರಿಗೆ ಬ್ರೈನ್ ಟ್ಯೂಮರ್ ಇದೆ ಎಂದು ತಿಳಿದು ಮೂಗಿನ ಮೂಲಕ ಮಿದುಳಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು.
ಸುಮಾರು ಮೂರು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಬಳಿಕ ಆಕೆ ಆರಾಮಾಗಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಇದೇ ಮೊದಲು ಇಂತಹ ಚಿಕಿತ್ಸೆ ಮಾಡಿರುವುದು. ಎ.ಆರ್.ಬಿ. ಆಯುಷ್ಮಾನ್ ಭಾರತ್ ಸ್ಕೀಂನಲ್ಲಿ ಅವರಿಗೆ ಯಾವುದೇ ಶುಲ್ಕವಿಲ್ಲದೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿದರು.
ಚಿಕಿತ್ಸಾ ತಂಡದಲ್ಲಿ ಅನಸ್ತೇಸಿಯಾ ಡಾ. ಮೇಘ, ಇ.ಎನ್.ಟಿ. ತಜ್ಞ ಡಾ. ಮಂಜುನಾಥ ರಾವ್, ಜನರಲ್ ಮೆಡಿಸನ್‍ನ ಡಾ. ತೇಜಸ್ವಿ ಮೊದಲಾದ ವೈದ್ಯರು ಇದ್ದರು.
ಈ ಸಂದರ್ಭದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ನಮ್ಮ ಆಸ್ಪತ್ರೆಗೆ ಬರುವ ರೋಗಿಗಳು ಬೇರೆ ಊರುಗಳಿಗೆ ಚಿಕಿತ್ಸೆಗೆ ಹೋಗದಂತೆ ಇಲ್ಲಿಯೇ ಚಿಕಿತ್ಸೆ ಮಾಡುವಷ್ಟು ಆಧುನಿಕ ಸೌಲಭ್ಯಗಳನ್ನು ಮಾಡಲಾಗಿದೆ ಎಂದರು.
ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಆಸ್ಪತ್ರೆಯ ಡೀನ್ ಡಾ. ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ. ಪಾಲಾಕ್ಷಯ್ಯ ಹಾಗು ಚಿಕಿತ್ಸೆಗೊಳಗಾಗಿದ್ದ ಪಾಲಮ್ಮ ಮೊದಲಾದವರಿದ್ದರು.