ಚಿತ್ರದುರ್ಗ. ಅ.30: ಸಾರ್ವಜನಿಕರಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ದೊರಕುವಂತಾಗಲು, ಜಿಲ್ಲಾಸ್ಪತ್ರೆಗೆ ಅವಶ್ಯವಿರುವ ಸೌಲಭ್ಯಗಳ ಪಟ್ಟಿ ತಯಾರಿಸಿ ಮಾಹಿತಿ ನೀಡಬೇಕು. ಈ ಕುರಿತು ಆರೋಗ್ಯ ಸಚಿವರ ಬಳಿ ಚರ್ಚಿಸಿ, ಜಿಲ್ಲಾಸ್ಪತ್ರೆಗೆ ಅತ್ಯಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ಇಲ್ಲಿನ ಜಿಲ್ಲಾಸ್ಪತ್ರೆ ಆವರಣದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
250 ಹಾಸಿಗೆ ಸಾಮಥ್ರ್ಯವಿರುವ ಜಿಲ್ಲಾಸ್ಪತ್ರೆಯು 450 ಬೆಡ್‍ಗಳಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಈ ಸಾಮಥ್ರ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ಹುದ್ದೆಗಳ ಮಾಹಿತಿಯನ್ನು ಸೃಜಿಸಿಕೊಂಡು ಅನುಮೋದನೆ ಪಡೆಯಬೇಕು ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ತಲಾ 10 ಜನ ಶುಶ್ರೂಷಕರು, 10 ಜನ ಗ್ರೂಪ್ “ಡಿ” ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಶೀಘ್ರ ವೇತನ ಬಿಡುಗಡೆ ಮಾಡಬೇಕು. ಸರ್ಕಾರದ ಸುತ್ತೋಲೆ, ಮಾರ್ಗಸೂಚಿ ಅನುಸಾರ ಅನುಮೋದನೆ ಪಡೆದು ಹೊರಗುತ್ತಿಗೆ ನೌಕರರ ಸೇವೆಯನ್ನು ಮುಂದುವರೆಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದ ಸಚಿವರು, ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದವರಿಗೆ ಅನ್ಯಾಯ ಮಾಡುವುದು ಬೇಡ ಎಂದು ಹೇಳಿದರು.
ಎಬಿಆರ್‍ಕೆ ಪ್ರಗತಿ ಸಾಧಿಸಿ: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿಆರ್‍ಕೆ) ಯೋಜನೆಯಡಿ ಜಿಲ್ಲೆಯಲ್ಲಿ ಶೇ.80 ರಷ್ಟು ಸಾಧನೆ ತೋರಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಸಚಿವರು ತಿಳಿಸಿದರು.
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಯಾವುದೇ ಕಾರಣಕ್ಕೂ ಜಿಲ್ಲಾ ಆಸ್ಪತ್ರೆಯ ವೈದ್ಯರು ಹೊರಗಡೆ ಚೀಟಿ ಬರೆಯಕೂಡದು ಈ ಕುರಿತು ವೈದ್ಯರಿಗೆ ಸೂಚನೆ ನೀಡುವಂತೆ ಜಿಲ್ಲಾ ಶಸ್ತ್ರಕಿತ್ಸಕರಿಗೆ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕರು ಹೊರಗಡೆಗೆ ಔಷಧಿ ಚೀಟಿ ಬರೆಯದಂತೆ ಈಗಾಗಲೇ ಎಲ್ಲ ವೈದ್ಯರಿಗೆ ಸೂಚನೆ ನೀಡಲಾಗಿದೆ. ರೆಫರೆನ್ಸ್ ಕೂಡ ಕಡಿಮಯಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಔಷಧಿಗಳು, ಮೆಡಿಸಿನಲ್ ಆಕ್ಸಿಜನ್, ಆರೋಗ್ಯ ಉಪಕರಣಗಳು, ಲ್ಯಾಬ್ ರಾಸಾಯನಿಕಗಳು, ಎಕ್ಸ್ ರೇ ಫಿಲಂಗಳು, ಯಂತ್ರೋಪಕರಣಗಳ ದುರಸ್ಥಿ, ವಿದ್ಯುತ್ ಸರಬರಾಜು ದುರಸ್ಥಿ, ಆರ್ಥೋ ಇಂಪ್ಲಾಂಟ್‍ಗಳು, ಲಿನನ್ ಸಾಮಾಗ್ರಿಗಳು, ಇಂಧನ, ನೀರು ಪೂರೈಕೆ, ಶೌಚಾಲಯ ದುರಸ್ಥಿ ಇನ್ನಿತರೆ ವೆಚ್ಚಗಳು ಸೇರಿದಂತೆ 2023-24ನೇ ಸಾಲಿನ ಆರ್ಥಿಕ ವರ್ಷಕ್ಕೆ ಜಿಲ್ಲಾ ಆಸ್ಪತ್ರೆಗೆ ರೂ.13 ಕೋಟಿ ಅಂದಾಜು ವೆಚ್ಚ ಇದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆಯ ಆರ್ಥೋ, ಕಣ್ಣು, ಜನರಲ್ ಸರ್ಜರಿ, ರಕ್ತನಿಧಿ ಕೇಂದ್ರ, ಪಿಡಿಯೋಟ್ರಿಕ್ಸ್, ಫೋರೆನ್ಸಿಕ್ ವಿಭಾಗಗಳಿಗೆ ಅವಶ್ಯವಾಗಿ ಬೇಕಾಗಿರುವ ಯಂತ್ರೋಪಕರಣಗಳನ್ನು ನಿಯಮಾನುಸಾರ ಸಮಿತಿಯಲ್ಲಿ ಹಣ ಲಭ್ಯತೆಯ ಅನುಸಾರ ಸರಬರಾಜು ಪಡೆಯಲು ಅನುಮತಿ ನೀಡುವಂತೆ ಕೋರಿದರು.
ಸಭೆಯಲ್ಲಿ ಶಾಸಕರಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ಭಾರತೀಯ ವೈದ್ಯ ಸಂಘ ಜಿಲ್ಲಾ ಶಾಖೆಯ ಡಾ.ದಿನೇಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾಸ್ಪತ್ರೆಯ ಸಿಬ್ಬಂದಿ ಇದ್ದರು.