ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.28 : ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದ 8 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಂಪ್ಯೂಟರ್ ಶಿಕ್ಷಕಿ ಪ್ರಿಯಾಂಕಾ ವಿರುದ್ಧ ಪೋಷಕರು, ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳವಾರ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಸೆ.28) ವಿದ್ಯಾರ್ಥಿಗಳ ಪೋಷಕರಲ್ಲಿ ಒಬ್ಬರಾದ ಕೃಷ್ಣಮೂರ್ತಿ ಎನ್ನುವವರು ದೂರು ನೀಡಿದ್ದಾರೆ.
ದೂರಿನಲ್ಲಿ ‘ದಿನಾಂಕ 27ರಂದು ಬೆಳಿಗ್ಗೆ ನನ್ನ ಮಗ ಹಾಗೂ ಇತರ ವಿದ್ಯಾರ್ಥಿಗಳಿಗೆ ಆರೋಗ್ಯ ಸರಿ ಇಲ್ಲದೆ ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ವಿಚಾರ ತಿಳಿದು ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಿದಾಗ ನನ್ನ ಮಗನಿಗೆ ವಾಂತಿ, ಸುಸ್ತಾಗಿತ್ತು. ಅವನಿಗೆ ವಿಚಾರ ಮಾಡಿದಾಗ ದಿನಾಂಕ 26ರಂದು ಬೆಳಿಗ್ಗೆ 9:00ಗೆ ತಿಂಡಿಗೆ ಹೋಗಲು ಹೊರಟಾಗ ನಮ್ಮ ಶಾಲೆಯ ಕಂಪ್ಯೂಟರ್ ಶಿಕ್ಷಕಿಯಾದ ಪ್ರಿಯಾಂಕಾ ಅವರು ನನಗೆ ಮತ್ತು ತಿಪ್ಪೇಸ್ವಾಮಿ,ಪ್ರಜ್ವಲ್, ಚಿರಂತ್, ಭಾರತ್, ರೋಹಿತ್ ಸುದರ್ಶನ್ ನಾಯಕ್, ಮನೋಜ್ ರವರಿಗೆ ಕೊಕೊನಟ್ ವಾಟರ್ ಲೋಟದಲ್ಲಿ ಹಾಕಿ ಕುಡಿಸಿರುತ್ತಾರೆ. ಕೊಕೊನೆಟ್ ವಾಟರ್ ಕುಡಿದ ಸ್ವಲ್ಪ ಸಮಯದ ನಂತರ ವಾಕರಿಕೆ, ವಾಂತಿ, ಹೊಟ್ಟೆ ನೋವು ಇತ್ಯಾದಿ ಸಮಸ್ಯೆಗಳು ಕಂಡು ಬಂದಿದ್ದು, ಈ ವಿಚಾರವನ್ನು ಶ್ರೀಮತಿ ಅವರಿಗೆ ತಿಳಿಸಿದ್ದು ಆದರೆ ಅವರು ಗಮನಕ್ಕೆ ತೆಗೆದುಕೊಳ್ಳಲಿಲ್ಲ ಸಂಜೆಯ ಹೊತ್ತಿಗೆ ಮೇಲ್ಕಂಡ ಎಲ್ಲರಿಗೂ ಪೂರ್ತಿ ಸುಸ್ತಾದಾಗ ಉಪ ಪ್ರಾಂಶುಪಾಲರು ಸಂಜೆ 7:00ಗೆ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದಾರೆಂಬ ವಿಚಾರ ತಿಳಿಸಿದನು.
ಸದರಿ ಶಾಲೆಯ ಉಪ ಪ್ರಾಂಶುಪಾಲರಾದ ಕೆ. ಶ್ರೀಮತಿ ಅವರು ಸದರಿ ಶಿಕ್ಷಕಿ ಪ್ರಿಯಾಂಕ ಅವರನ್ನು ರಾತ್ರೋರಾತ್ರಿ ಯಾರಿಗೂ ವಿಷಯ ತಿಳಿಸದೆ ಬೆಂಗಳೂರಿಗೆ ಕಳಿಸಿರುತ್ತಾರೆ. ನವೋದಯ ಶಾಲೆಯ ಕಂಪ್ಯೂಟರ್ ಶಿಕ್ಷಕಿಯಾದ ಪ್ರಿಯಾಂಕ ಎಂಬವರು ಮತ್ತು ಬರುವ ಅನಾರೋಗ್ಯಕರವಾದ ಪದಾರ್ಥವನ್ನು ಬೆರೆಸಿ, ನನ್ನ ಮಗನಾದ ಲಿಖಿತ್ ರಾಜ್ ಹಾಗೂ ಇತರೆ ವಿದ್ಯಾರ್ಥಿಗಳಿಗೆ ಕೊಕೊನಟ್ ವಾಟರ್ ನಲ್ಲಿ ಯಾವುದೋ ಮತ್ತು ಬರುವ ಅನಾರೋಗ್ಯಕರವಾದ ಪದಾರ್ಥವನ್ನು ಬೆರೆಸಿ ನನ್ನ ಮಗನಾದ ಲಿಖಿತ್ ರಾಜ್ ಹಾಗೂ ಇತರೆ ವಿದ್ಯಾರ್ಥಿಗಳಿಗೆ ಒತ್ತಾಯ ಪೂರ್ವಕವಾಗಿ ಕುಡಿಸಿದ್ದರಿಂದ ಮಕ್ಕಳ ಆರೋಗ್ಯಕ್ಕೆ ಹಾನಿ ಮತ್ತು ಗಾಯ ಉಂಟಾಗುತ್ತದೆ ಎಂದು ತಿಳಿದು ಉದ್ದೇಶಪೂರ್ವಕವಾಗಿ ಕೊಕೊನಟ್ ವಾಟರ್ ಕುಡಿಸಿರುತ್ತಾರೆ. ಸದರಿ ಶಿಕ್ಷಕಿ ಪ್ರಿಯಾಂಕ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ವಿದ್ಯಾರ್ಥಿಗಳನ್ನು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ವಿದ್ಯಾರ್ಥಿಗಳಿಗೆ ಮಕ್ಕಳ ತಜ್ಞರಾದ ಡಾ. ಶ್ರೀರಂಗೇಗೌಡ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದರು. ಈ ಘಟನೆ ಬಗ್ಗೆ ಸ್ಥಳೀಯ ವ್ಯಕ್ತಿ ನಾಗೇಶ್ ಎಂಬುವರು ಮಾತನಾಡಿ ಕೇವಲ ಎಂಟು ಜನ ವಿದ್ಯಾರ್ಥಿಗಳಿಗೆ ಮಾತ್ರ ಈ ರೀತಿ ಘಟನೆ ಆಗಿದ್ದು ಅನುಮಾನಸ್ಪದವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಇದೀಗ ಶಿಕ್ಷಕಿ ವಿರುದ್ಧ ದೂರು ಕೂಡ ದಾಖಲಾಗಿದೆ.