ಚಿತ್ರದುರ್ಗ : ವಿದ್ಯಾರ್ಥಿಗಳು ಓದಿನ ಸಮಯದಲ್ಲೇ ಆರ್ಥಿಕವಾಗಿ ಸಬಲೀಕರಣವಾಗಬೇಕು, ಆ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಮಾರ್ಪಾಡು ಆದರೆ ಮಾತ್ರ ವಿದ್ಯಾರ್ಥಿಗಳು ಮುಂದಿನ ಅಭ್ಯಾಸ ಮಾಡಲು ಅನುಕೂಲಕರವಾಗುತ್ತದೆ, ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ, ತಮ್ಮ ಓದಿನ ಗುರಿಯನ್ನು ಮುಟ್ಟಲು ಅಸಾಧ್ಯವಾಗುತ್ತಿದೆ, ಬಡತನ ನಿವಾರಣೆಯು ಸಹ ಶಿಕ್ಷಣದ ಒಂದು ಉದ್ದೇಶವಾಗಬೇಕು ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಹ್ಯಾದ್ರಿ ಇಂಗ್ಲೀಷ್ ಅಕಾಡೆಮಿಯ ಸಂಸ್ಥಾಪಕರು ಹಾಗೂ ಸಾಹಿತಿಗಳು ಆದ ಯೋಗೀಶ್ ಸಹ್ಯಾದ್ರಿ ಅವರು ಮಾತನಾಡಿದರು.

ಅವರು ಸರ್ಕಾರಿ ವಿಜ್ಞಾನ ಕಾಲೇಜು ಮಾಳಪ್ಪನಟ್ಟಿಯಲ್ಲಿ ಏಪ್ರಿಲ್ 07 ರಂದು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರದಲ್ಲಿ ಮಾತನಾಡುತ್ತಿದ್ದರು.

ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ಮುಂದೆ ಐಎಎಸ್, ಐಪಿಎಸ್ ಉನ್ನತ ಹುದ್ದೆಗಳ ಪರೀಕ್ಷೆ ಬರೆಯಲು ಅಸಹಾಯಕರಾಗಿದ್ದಾರೆ, ಅವರಿಗೆ ತರಬೇತಿಗಾಗಿ ಹಣ ಪಾವತಿಸಲು ಸಹ ಕಷ್ಟಕರವಾಗಿದೆ, ಹಾಗಾಗಿ ವಿದ್ಯಾರ್ಥಿಗಳು ಆರ್ಥಿಕವಾಗಿ ಸಬಲೀಕರಣವಾದರೆ ಮಾತ್ರ ಅವರ ಮುಂದಿನ ವಿದ್ಯಾಭ್ಯಾಸವನ್ನು ಸುಲಭವಾಗಿ ನೆರವೇರಿಸಿಕೊಳ್ಳಬಹುದು ಎಂದರು.
ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಬಡತನ, ಅಸಮಾನತೆ, ಇವುಗಳನ್ನು ನಿವಾರಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಮುಟ್ಟಬೇಕಾಗಿದೆ, ಅದಕ್ಕಾಗಿ ತಾವುಗಳು ಆದಷ್ಟು ಕೌಶಲ್ಯಗಳನ್ನು ಕಲಿತು, ದುಡಿಮೆಯ ದಾರಿಯನ್ನು ಕಂಡುಹಿಡಿದುಕೊಂಡು, ತಮ್ಮ ವಿದ್ಯಾಭ್ಯಾಸದ ಗುರಿಯನ್ನು ಮುಟ್ಟಬೇಕು ಎಂದರು.
ಇಂಗ್ಲೀಷ್ ಭಾಷೆ ಅಂತರಾಷ್ಟ್ರೀಯ ಭಾಷೆಯಾಗಿದ್ದು, ಅದರ ಕಲಿಕೆಯಿಂದ ನೀವು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ಸೇವೆ ಸಲ್ಲಿಸುವ ಅವಕಾಶವಾಗುತ್ತದೆ, ಭಾರತದಲ್ಲಿರುವ ಎಲ್ಲಾ ಭಾಷೆಗಳಿಗೂ ಸಹ ಅಷ್ಟೇ ಗೌರವಾನ್ವಿತವಾಗಿ ಬಳಕೆ ಮಾಡಬೇಕು, ರಾಷ್ಟ್ರೀಯ ಭಾಷೆ, ಪ್ರಾಂತೀಯ ಭಾಷೆ ಮತ್ತು ಅಂತರಾಷ್ಟ್ರೀಯ ಭಾಷೆಗಳನ್ನ ವಿದ್ಯಾರ್ಥಿಗಳು ಕಲಿತು ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಉಪನ್ಯಾಸಕರಾದ ಮೋಹಿನುದ್ದೀನ್ ಖಾನ್ ಅವರು ಮಾತನಾಡುತ್ತಾ ಗಿಡಮೂಲಿಕೆಗಳಿಂದ ಆರೋಗ್ಯ ಸಂಪಾದಿಸುವುದು ಒಳ್ಳೆಯದು, ಮನೆ ಸುತ್ತಮುತ್ತಲಿರುವ ಔಷಧಿ ಸಸ್ಯಗಳ ಬಗ್ಗೆ ಗ್ರಾಮೀಣ ಜನರಿಗೆ ಮಾಹಿತಿ ನೀಡಬೇಕು, ಪ್ರತಿಯೊಂದುಕ್ಕೂ ಸಹ ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿಯನ್ನು ನಂಬಿಕೊಳ್ಳಬಾರದು, ನಮ್ಮಲ್ಲಿರುವ ವೈದ್ಯಕೀಯ ಪದ್ಧತಿಯನ್ನು ಸಹ ನಾವು ಶ್ರೇಷ್ಠವೆಂದು ಅಳವಡಿಸಿಕೊಳ್ಳಬೇಕು ಎಂದು ಹಲವಾರು ಗಿಡಮೂಲಿಕೆಗಳನ್ನ ಜನರಿಗೆ ತೋರಿಸಿ ಪ್ರಾತ್ಯಕ್ಷಿ ಕತೆಯ ಮುಖಾಂತರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರೇಖಾ ಬಸವರಾಜ್ ಮಾಜಿ ಅಧ್ಯಕ್ಷರು, ಶ್ರೀಮತಿ ರಾಧಾ ಗುರುಸ್ವಾಮಿ, ಮಾಜಿ ಅಧ್ಯಕ್ಷರು, ವೀರೇಶ್ ರವಿಕುಮಾರ್, ಎನ್ಎಸ್ಎಸ್ ಅಧಿಕಾರಿಗಳಾದ ಡಾ.ಸತೀಶ್ ಗೌಡ. ಎಸ್, ಲಾಲ್ ಸಿಂಗ್ ನಾಯಕ್, ಶ್ರೀಮತಿ ಫೈರೋಜಾ, ಗುರುದೇವ್ ಮಾಳಿ, ಸುರೇಶ್ ಎಸ್ ಮಾದಾರ್, ಜೀವನ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಕೊನೆಯ ಭಾಗದಲ್ಲಿ ವಿದ್ಯಾರ್ಥಿಗಳು ಹೆಣ್ಣಿನ ಮೇಲೆ ಆಗುವ ದೌರ್ಜನಗಳ ಕುರಿತು ನಾಟಕಗಳನ್ನು ಪ್ರದರ್ಶಿಸಿ, ನೀರು ಉಳಿತಾಯದ ಬಗ್ಗೆ ಮುಖಾಭಿನಯದ ಮುಖಾಂತರ ಜನರನ್ನ ಮನರಂಜಿಸಿದರು.

