ಉಡುಪಿ: ಅಯೋಧ್ಯೆಯಲ್ಲಿ ನಾಳೆ ರಾಮಮಂದಿರ ಉದ್ಘಾಟನೆಯಾಗಲಿದೆ. ಈ ಸುಸಂದರ್ಭದಲ್ಲಿ ಎಲ್ಲರು ಭಾಗಿಯಾಗಬೇಕೆಂಬುದು ಅಭಿಪ್ರಾಯ. ಹೀಗಾಗಿ ಶಾಲಾ-ಕಾಲೇಜಿಗೂ ರಜೆ ಘೋಷಣೆ ಮಾಡಿ, ಮಕ್ಕಳು ರಾಮನ ಜಪದಲ್ಲಿ ಭಾಗಿಯಾಗಲಿ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಲಾಗಿದೆ. ಆದರೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ ಸರ್ಕಾರ ಇನ್ನು ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ಸರ್ಕಾರಿ ಶಾಲಾ-ಕಾಲೇಜುಗಳನ್ನು ಹೊರತುಪಡಿಸಿ ಈಗಾಗಲೇ ಕೆಲ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿಯ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಸ್ವಯಂ ಪ್ರೇರಿತವಾಗಿ ರಜೆಯನ್ನು ಪಡೆಯಿರಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ವಿದ್ಯಾರ್ಥಿಗಳೇ, ಜನವರಿ 22 ರಂದು ಸ್ವಯಂ ರಜೆ ಪಡೆದು ರಾಮೋತ್ಸವದಲ್ಲಿ ಪಾಲ್ಗೊಳ್ಳಿ. ಸಿದ್ದರಾಮಯ್ಯ ಸರ್ಕಾರ ಐತಿಹಾಸಿಕ ದಿನದಂದು ರಜೆ ಘೋಷಣೆ ಮಾಡದೇ ಸಮಸ್ತ ಹಿಂದೂ ಸಮಾಜದ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದೆ. ಸ್ವಯಂ ರಜೆ ಪಡೆದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಶಿಕ್ಷಣ ಸಂಸ್ಥೆ ಕ್ರಮ ಕೈಗೊಂಡರೆ ಶಾಸಕನಾಗಿ ವಿದ್ಯಾರ್ಥಿಗಳ ಜೊತೆ ನಿಂತು ನ್ಯಾಯ ಒದಗಿಸಲು ನಾನು ಸಿದ್ದ ಎಂದು ಟ್ವೀಟ್ ಮಾಡಿದ್ದಾರೆ.
ದೇಶಾದ್ಯಂತ ರಾಮಜಪ ಜೋರಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ರಾಮನ ಫೋಟೋ, ಬ್ಯಾನರ್ ಕಟ್ಟಲಾಗಿದೆ. ರಾಮ ಮಂದಿರಗಳೆಲ್ಲಾ ಅಲಂಕಾರಗೊಂಡಿವೆ. ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಅಲಂಕಾರ ಮಾಡಿದ್ದು, ಭಜನೆ, ಜಪಕ್ಕೆ ತಯಾರಿ ನಡೆದಿದೆ. ಎಲ್ಲೆಲ್ಲೂ ರಾಮ ಧ್ಯಾನ ಮಾಡುತ್ತಿದ್ದಾರೆ.