ಪಿಯು ವಿಜ್ಞಾನ ಕನ್ನಡದಲ್ಲಿ ಬೋಧನೆಗೆ ಶೀಘ್ರ ವಿದ್ಯಾರ್ಥಿ ಮತ್ತು ಪೋಷಕರ ಸಭೆ : ಎನ್.ರಾಜು

3 Min Read

 

ಚಿತ್ರದುರ್ಗ, (ಜೂ.15): ಪದವಿ ಪೂರ್ವ ಕಾಲೇಜುಗಳಲ್ಲಿನ ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಬೋಧನೆ ಮಾಡುವ ಸಂಬಂಧ  ಆಯ್ದ ಕಾಲೇಜುಗಳಲ್ಲಿ ಶೀಘ್ರ ವಿದ್ಯಾರ್ಥಿ, ಪೋಷಕರ ಸಭೆ ಕರೆಯಲಾಗುವುದೆಂದು  ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ರಾಜು ಹೇಳಿದರು.

ಇಲಾಖೆಯ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲೆಯ ಪಿಯು ವಿಜ್ಞಾನ ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಪಿಯು ವಿಜ್ಞಾನ ಪಠ್ಯಪುಸ್ತಕಗಳ ಮುದ್ರಿಸಿ ಸರ್ಕಾರಿ ಕಾಲೇಜುಗಳಿಗೆ ಸರಬರಾಜು ಮಾಡಿದೆ.

ಎಸ್‍ಎಸ್‍ಎಲ್‍ಸಿಯಲ್ಲಿ ಕನ್ನಡ ಮೀಡಿಯಂ ನಲ್ಲಿ ಓದಿದ ವಿದ್ಯಾರ್ಥಿಗಳು ಪಿಯು ನಲ್ಲಿ ವಿಜ್ಞಾನ ವಿಷಯ ಕನ್ನಡದಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಹಾಗಾಗಿ ಮನವರಿಕೆ ಮಾಡಿಕೊಡುವ ಸಂಬಂಧ ಪೋಷಕರು ಹಾಗೂ ವಿದ್ಯಾರ್ಥಿಗಳ ಸಭೆ ಕರೆಯಲಾಗುತ್ತಿದೆ ಎಂದರು.

ಚಿತ್ರದುರ್ಗದ ಜಿಲ್ಲೆಯಲ್ಲಿ ವಿಜ್ಞಾನ ಬೋಧಿಸುವ  ಒಟ್ಟು 69 ಪಿಯು ಕಾಲೇಜುಗಳಿವೆ. 22 ಸರ್ಕಾರಿ,  13 ಅನುದಾನಿತ, 34 ಅನುದಾನ ರಹಿತ ಕಾಲೇಜುಗಳಿವೆ. ಪ್ರತಿ ಸರ್ಕಾರಿ ಕಾಲೇಜುಗಳಿಗೆ ಐದು ಸೆಟ್ ಪುಸ್ತಗಳ ವಿತರಣೆ ಮಾಡಲಾಗಿದೆ. ಬಹುತೇಕ ಉಪನ್ಯಾಸಕರು ಈಗಲೂ ವಿಜ್ಞಾನದ ವಿಷಯವನ್ನು ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಮನನ ಮಾಡಿಕೊಟ್ಟು ನಂತರ ಇಂಗ್ಲೀಷ್‍ನಲ್ಲಿ ನೋಟ್ಸ್ ಕೊಡುತ್ತಾರೆ. ಕನ್ನಡದಲ್ಲಿಯೇ ಬರೆದರೆ ಹೆಚ್ಚು ಅಂಕ ಪಡೆಯಬಹುದಾಗಿದೆ. ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಈ ಸಂಬಂಧ ಸಭೆ ಕರೆದು ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದರು.

ಅನ್ನದ ಭಾಷೆಯಾಗಿ ಕನ್ನಡ ವೇದಿಕೆಯ ಜೆ.ಯಾದವರೆಡ್ಡಿ ಮಾತನಾಡಿ ಜಗತ್ತಿನ ಯಾವ ದೇಶದಲ್ಲಿಯೂ ಇಂಗ್ಲೀಷ್ ಬದುಕು ಕಟ್ಟಿಕೊಟ್ಟಿಲ್ಲ. ಅಲ್ಲಿನ ಮಾತೃಭಾಷೆಯೇ ಬದುಕಿಗೆ ಪ್ರಧಾನ ಭೂಮಿಕೆಯಾಗಿದೆ.ಜಪಾನ್, ಚೀನ, ಜರ್ಮನ್ , ರಷ್ಯಾ ಸೇರಿದಂತೆ ಎಲ್ಲಿಯೂ ಇಂಗ್ಲೀಷ್ ಇಲ್ಲ. ಅವರದೇ ಮಾತೃಭಾಷೆಯಲ್ಲಿ ಅವರು ಶಿಕ್ಷಣ ಪಡೆಯುತ್ತಿದ್ದಾರೆ. ವಾಸ್ತವಾಂಶ ಹೀಗಿರುವಾಗ ನಾವೇಕೆ ಕನ್ನಡದಲ್ಲಿ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಿಕೊಳ್ಳಬಾರದೆಂದರು.

ತಮಿಳುನಾಡು, ಕೇರಳದಲ್ಲಿ ವಿಜ್ಞಾನವೇ ಅಲ್ಲಿನ ಮಾತೃಭಾಷೆಯಲ್ಲಿಯೇ ಬೋಧನೆ ಮಾಡಲಾಗುತ್ತಿದೆ. ತಮಿಳು, ಮಲೆಯಾಳಂ ನಲ್ಲಿ ಓದುವ, ಬರೆಯುವ ಅಭ್ಯಾಸ ಇಟ್ಟುಕೊಂಡಿರುವ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್‍ಗೆ  ಲಗ್ಗೆ ಇಡುತ್ತಿದ್ದಾರೆ. ಕೇವಲ ಇಂಗ್ಲೀಷ್ ಕಾರಣಕ್ಕೆ ಕನ್ನಡದ ಮಕ್ಕಳೇಕೆ ಇಂಜಿನಿಯರಿಂಗ್, ಮೆಡಿಕಲ್ ನಿಂದ ವಂಚಿತರಾಗಬೇಕೆಂದು ಪ್ರಶ್ನಿಸಿದರು.

ಹಳ್ಳಿಗಳಲ್ಲಿನ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿಯಲ್ಲಿ ಶೇ.90 ರಷ್ಟು ಅಂಕ ಪಡೆದರೂ ಇಂಗ್ಲೀಷ್ ಕಾರಣಕ್ಕೆ ಕಲಾ ವಿಭಾಗದ ಕಡೆ ಮುಖ ಮಾಡುತ್ತಿದ್ದಾರೆ. ವಿಜ್ಞಾನ ಓದಲು ನಮಗೆ ಅರ್ಹತೆಗಳೇ ಇಲ್ಲವೆಂಬಷ್ಟರ ಮಟ್ಟಿಗೆ ನೋವು ಮಾಡಿಕೊಳ್ಳುತ್ತಿದ್ದಾರೆ. ವಿಜ್ಞಾನ ಕನ್ನಡದಲ್ಲಿಯೂ ಓದಿ ಡಾಕ್ಟರ್  ಇಂಜಿನಿಯರ್ ಗಳು ಆಗಬಹುದೆಂಬ ವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸವ ಪ್ರಾಚಾರ್ಯರು, ಉಪನ್ಯಾಸಕರು ಮಾಡಬೇಕಿದೆ ಎಂದು ಯಾದವರೆಡ್ಡಿ ಹೇಳಿದರು.

ವೇದಿಕೆಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ, ಮಹರಾಷ್ಟ್ರದ ಸಂಕ ಗ್ರಾಮದಲ್ಲಿರುವ ಪಿಯು ಕಾಲೇಜಿನಲ್ಲಿ ಅಲ್ಲಿನ ಉಪನ್ಯಾಸಕರು ವಿಜ್ಞಾನ ಕನ್ನಡದಲ್ಲಿ ಬೋಧನೆ ಮಾಡಿ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಡೆ ಮುಖ ಮಾಡಿದ್ದಾರೆ. ಅಲ್ಲಿ ಸಾಧ್ಯವಾಗುವುದಾದರೆ ಇಲ್ಲಿ ಏಕೆ ಆಗುವುದಿಲ್ಲವೆಂದರು. ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿರುವ ಫಲಿತಾಂಶವ ತೋರಿಸಿದರು.

ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯವರು ಇಂಜಿನಿಯರಿಂಗ್ ಸಂಬಂಧಿಸಿದಂತೆ ಕನ್ನಡ ಪಠ್ಯ ಪುಸ್ತಕಗಳ ಮುದ್ರಿಸಿದ್ದಾರೆ. ಪಿಯು ನಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಓದಿದವರು ಮಂದುವರಿದ ಭಾಗವಾಗಿ ಇಂಜಿನಿಯರಿಂಗ್‍ನಲ್ಲಿಯೂ ಅವಕಾಶ ಪಡೆಯಬಹುದು. ಸಿಇಟಿ, ನೀಟ್ ನಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ವಿಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡುವ ವ್ಯವಸ್ಥೆಯೊಂದನ್ನು ಜಾರಿಗೆ ತರಲೇ ಬೇಕಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಾಲೂಕಿಗೆ ಒಂದಾದರೂ ಪಿಯು ವಿಜ್ಞಾನದ ಕನ್ನಡ ಬೋಧನೆಯ ಕಾಲೇಜುಗಳ ತೆರೆಯಲೇಬೇಕಾಗಿದೆ.  ಈ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯ ಪುಸ್ತಕ ಪೂರೈಕೆ ಹಾಗೂ ಶುಲ್ಕವನ್ನು ಭರಿಸಲು ಅನ್ನದ ಭಾಷೆಯಾಗಿ ಕನ್ನಡ ವೇದಿಕೆ ಸಿದ್ದವಿದೆ ಎಂದರು.

ವೇದಿಕೆಯ ಸಂಚಾಲಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ  ಶ.ಮಂಜುನಾಥ್, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ನಾಗಣ್ಣ, ಕಾರ್ಯದರ್ಶಿ ದುರುಗಪ್ಪ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *