ಚಿತ್ರದುರ್ಗ,(ಜುಲೈ.06) : ವೈದ್ಯರ ಹೆಸರು ಬಳಸಿ ನರ್ಸ್‍ಗಳು ಹೆರಿಗೆ ಮಾಡಿಸುವ ಸಂದರ್ಭ ದುರುಪಯೋಗಪಡಿಸಿಕೊಂಡು ಹಣ ವಸೂಲಿಗೆ ಇಳಿದಿದ್ದಾರೆ. ಇದು ಹೀಗೆ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಗಿರೀಶ್ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾ ಆಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ಆಸ್ಪತ್ರೆಯ ಎಲ್ಲಾ ವಿಭಾಗಗಳ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ಸಾರ್ವಜನಿಕರಿಗೆ ಉಚಿತ ಸೇವೆ ಸಿಗಬೇಕು ಎಂಬುದು ಸಂವಿಧಾನದ ಆಶಯ. ಮೂಲಭೂತ ಹಕ್ಕಿನ ಅಡಿಯಲ್ಲಿ ಎಲ್ಲಾ ನಾಗರಿಕರಿಗೂ ಬದುಕುವ ಹಕ್ಕು ಕಲ್ಪಿಸಲಾಗಿದೆ. ಹಾಗಾಗಿ ಜನರ ಸೇವೆಗಾಗಿ ಸರ್ಕಾರಿ ಆಸ್ಪತ್ರೆಗಳು ನಿರ್ಮಾಣಗೊಂಡಿವೆ. ಇದನ್ನು ಅರಿತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಬಡ ರೋಗಿಗಳು ಬರುತ್ತಾರೆ. ಬಡವರಿಗಾಗಿ ಸರ್ಕಾರ ಪ್ರತಿ ವರ್ಷವೂ ಸಹ ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದೊಂದು ಯೋಜನೆಗಳನ್ನ ಜಾರಿಗೆ ತರುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಹಣವನ್ನ ವ್ಯಯ ಮಾಡುತ್ತಿದ್ದು, ಇದರ ಸದುಪಯೋಗವಾಗಬೇಕು ಎಂದು ತಿಳಿಸಿದರು.
ಸೂಕ್ತ ಭದ್ರತೆಗೆ ಸೂಚನೆ: ಜಿಲ್ಲಾ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ರಾತ್ರಿ ಪಾಳಿಯದಲ್ಲಿ ಕಾರ್ಯನಿರ್ವಹಿಸುವುದರಿಂದ ಯಾವುದೇ ರಕ್ಷಣೆ ಇಲ್ಲ ಎಂಬ ಕುರಿತು ಮಹಿಳಾ ವೈದ್ಯರು ಸಭೆಯಲ್ಲಿ ದೂರಿದರು.
ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು, ಕೂಡಲೇ ನಗರಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಗೆ ದೂರವಾಣಿ ಮೂಲಕ ಸಂಪರ್ಕಿಸಿ ರಾತ್ರಿ ಪಾಳಿಯ ಸಿಬ್ಬಂದಿಗೆ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಅಲ್ಲದೇ ಆಸ್ಪತ್ರೆ ಮುಂಭಾಗದಲ್ಲಿ ಹೆಚ್ಚಿನ ವಾಹನಗಳ ದಟ್ಟಣೆಯಿಂದ ಸಾರ್ವಜನಿಕರಿಗೆ ಹಾಗೂ ಆಂಬುಲೆನ್ಸ್‍ಗಳಿಗೆ ತೊಂದರೆ ಉಂಟಾಗುತ್ತಿರುವುದನ್ನೂ ತಪ್ಪಿಸುವಂತೆ ಸಲಹೆ ನೀಡಿದರು.
ಆಸ್ಪತ್ರೆ ಸ್ವಚ್ಛವಾಗಿರಲಿ: ಆಸ್ಪತ್ರೆ ಮುಂಭಾಗದಲ್ಲಿರುವ ಅಂಗಡಿ-ಮುಂಗ್ಗಟ್ಟುಗಳನ್ನು ತೆರವುಗೊಳಿಸಿ. ಪ್ರತ್ಯೇಕವಾದ ಜಾಗದ ವ್ಯವಸ್ಥೆ ಕಲ್ಪಿಸಿ ಅಲ್ಲಿಗೆ ಸ್ಥಳಾಂತರಿಸಬೇಕು. ಕಾರು, ಬೈಕ್, ಆಟೋಗಳಿಗೆ ಪ್ರತ್ಯೇಕವಾದ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು. ಭೇಟಿ ನೀಡುವ ಸಾರ್ವಜನಿಕರಿಗೆ ಆಸ್ಪತ್ರೆಯು ಇಡೀ ವಾತಾವರಣ ಸ್ವಚ್ಛಂದವಾಗಿ ಕಾಣುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜಪ್ಪ ಮಾತನಾಡಿ, ಆಸ್ಪತ್ರೆಯ ಸ್ವಚ್ಛತೆಗೆ ಸಂಬಂಧಪಟ್ಟಂತೆ ಸಾಕಷ್ಟು ದೂರುಗಳು ಬಂದಿವೆ. ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆಯಾ ವಿಭಾಗದ ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗಲು ಹಾಗೂ ಮಾಹಿತಿಗಾಗಿ ವಿಭಾಗದಲ್ಲಿ ಅವರ ಹೆಸರುಗಳುಳ್ಳ ನಾಮಫಲಕ ಅಳವಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಆನಂದ್ ಪ್ರಕಾಶ್, ವೈದ್ಯರಾದ ಡಾ.ದಿನೇಶ್, ಡಾ.ರಂಗೇಗೌಡ, ಡಾ.ಮೋಹನ್ ಕುಮಾರ್, ಡಾ.ಮಲ್ಲಪ್ಪ, ಡಾ.ಮಲ್ಲಿಕಾರ್ಜುನ್, ನಗರಸಭೆಯ ಅಧಿಕಾರಿ ಸಹಾಯಕ ಇಂಜಿನಿಯರ್ ಜಾಫರ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಸಿದ್ದರು.