ಚಿತ್ರದುರ್ಗದಲ್ಲಿ ಖಾಸಗಿ ನಿವೇಶನಗಳ ಮಾಲೀಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ : ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಸೂಚನೆ

suddionenews
1 Min Read

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.11) : ನಗರದಲ್ಲಿನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಹಾಗೂ ಸ್ವಚ್ಛತೆ ಕುರಿತಂತೆ ಪರಿಶೀಲಿಸಲು ಲೋಕಾಯುಕ್ತರಾದ ನ್ಯಾ. ಬಿ.ಎಸ್. ಪಾಟೀಲ್ ಅವರು ಬೆಳ್ಳಂಬೆಳಿಗ್ಗೆಯೇ ನಗರ ಸಂಚಾರ ಕೈಗೊಂಡರು.

ನಗರದ ಹೊಳಲ್ಕೆರೆ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಬಳಿಕ ಮೆದೆಹಳ್ಳಿ ರಸ್ತೆ, ಖಾಸಗಿ ಬಸ್ ನಿಲ್ದಾಣ, ಸಂತೆಹೊಂಡ ರಸ್ತೆ, ಬಸವೇಶ್ವರ ಟಾಕೀಸ್ ರಸ್ತೆಗೆ ಭೇಟಿ ನೀಡಿದರು.

ಬಸವೇಶ್ವರ ಟಾಕೀಸ್ ರಸ್ತೆಯ ಗುರುವೈಭವ ಬಳಿಯ ಖಾಲಿ ನಿವೇಶನದಲ್ಲಿ ಕಸ ಹಾಗೂ ಹಸಿ ತ್ಯಾಜ್ಯದ ಸಂಗ್ರಹದ ರಾಶಿ ಬಿದ್ದಿರುವುದನ್ನು ಕಂಡ ಲೋಕಾಯುಕ್ತರು, ನಗರಸಭೆ ಪೌರಾಯುಕ್ತರು ಹಾಗೂ ಆರೋಗ್ಯ ನಿರೀಕ್ಷಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಖಾಲಿ ನಿವೇಶನಗಳು ಕಸ ತುಂಬುವ ತೊಟ್ಟಿಗಳಲ್ಲ.  ಕಸದ ರಾಶಿ ಸಂಗ್ರಹಕ್ಕೆ ಕಾರಣವಾಗುತ್ತಿರುವ ಖಾಸಗಿ ನಿವೇಶನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅವರಿಗೆ ಸ್ವಚ್ಛಗೊಳಿಸಲು ಸೂಚಿಸಬೇಕು. ಒಂದು ವೇಳೆ ಸ್ವಚ್ಛಗೊಳಿಸದಿದ್ದಲ್ಲಿ, ದಂಡ ಹಾಕಿ, ನಗರಸಭೆಯಿಂದಲೇ ಸ್ವಚ್ಛಗೊಳಿಸಿ, ಅದರ ಶುಲ್ಕವನ್ನು ನಿವೇಶನದಾರರಿಂದ ವಸೂಲಿ ಮಾಡುವಂತೆ ಸೂಚಿಸಿದರು.

ನಗರದಲ್ಲಿ ಇದುವರೆಗೂ ಇಂತಹ ಎಷ್ಟು ನಿವೇಶನದಾರರ ಮೇಲೆ ಕ್ರಮ ಕೈಗೊಂಡಿದ್ದೀರಿ ಎಂಬ ಬಗ್ಗೆ ಮಾಹಿತಿ ನೀಡಬೇಕು. 03 ದಿನಗಳ ಒಳಗಾಗಿ ಎಲ್ಲವೂ ಸ್ವಚ್ಛವಾಗಬೇಕು,  ಅಲ್ಲದೆ ಪ್ರತಿನಿತ್ಯವೂ ಸ್ವಚ್ಛವಾಗಿಸಬೇಕು ಎಂದು ಸೂಚನೆ ನೀಡಿದರು.  ಈ ಬಗ್ಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು 03 ದಿನಗಳ ಬಳಿಕ ಪರಿಶೀಲಿಸಿ, ವರದಿ ಸಲ್ಲಿಸುವಂತೆ ತಿಳಿಸಿದರು.  ಬಳಿಕ ನಗರದ ಕೆಳಗೋಟೆ, ಗೋಪಾಲಪುರ ರಸ್ತೆ, ಎನ್‍ಹೆಚ್ 04 ಸರ್ವೀಸ್ ರಸ್ತೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಾಸುದೇವರಾಮ್, ಡಿವೈಎಸ್‍ಪಿ ಮೃತ್ಯುಂಜಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗನಾಥ್, ಪೌರಾಯುಕ್ತ ಶ್ರೀನಿವಾಸ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *