ಚಿತ್ರದುರ್ಗ. ಜ.04: ಸ್ವಚ್ಛತೆ, ಪೌಷ್ಠಿಕ ಆಹಾರ ಸೇವನೆ, ದುಶ್ಚಟಗಳಿಂದ ದೂರವಿರುವುದೇ ಆರೋಗ್ಯಕ್ಕೆ ರಹದಾರಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.
ನಗರದ ಅಗಸನಕಲ್ಲು ಟಿಪ್ಪುನರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಆರೋಗ್ಯ ಇಲಾಖೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಶನಿವಾರ ಜರುಗಿದ ಸ್ವ-ಸಹಾಯ ಸಂಘಗಳ ಗುಂಪಿಗೆ ಪರಿಸರ ಸ್ವಚ್ಛತೆ, ಜೀವನ ಮೌಲ್ಯ ತಿಳಿಸುವ ಆರೋಗ್ಯ ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲುಷಿತ ನೀರು, ಗಾಳಿ, ಆಹಾರ ಸೇವನೆ ಮಾಡುವುದರಿಂದ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ರೋಗ ರುಜಿನಿಗಳು ನಿಮ್ಮನ್ನು ಬಾಧಿಸುವುದಲ್ಲದೆ ದುಡಿಯುವ ದಿನಗಳ ಕಡಿಮೆ ಮಾಡಿ, ಕೌಟುಂಬಿಕ ಆರ್ಥಿಕ ಮುಗ್ಗಟ್ಟು ಬರುತ್ತದೆ. ಹಾಗಾಗಿ ಜೀವನ ಮೌಲ್ಯ ಅರ್ಥ ಮಾಡಿಕೊಳ್ಳಿ ನಿಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಎಂದು ಸಲಹೆ ನೀಡಿದರು.
ಪೌಷ್ಟಿಕ ಆಹಾರ ಸೇವನೆ, ಶುದ್ಧವಾದ ನೀರನ್ನು ಕುಡಿಯಿರಿ, ಶೌಚಾಲಯವನ್ನು ಬಳಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಬಾಲ್ಯ ವಿವಾಹ ಮಾಡಬೇಡಿ. ಬಾಲ್ಯ ವಿವಾಹ ನಿಷೇಧ ಕಾಯ್ದೆ ತುಂಬಾ ಕಠಿಣವಾಗಿದೆ. ನಿಮ್ಮ ಸುತ್ತ-ಮುತ್ತ ಇಂತಹ ಪ್ರಕರಣ ಕಂಡು ಬಂದಲ್ಲಿ 1098ಕ್ಕೆ ದೂರವಾಣಿ ಕರೆ ಮೂಲಕ ಮಾಹಿತಿ ನೀಡಿ. ಬಾಲ್ಯ ವಿವಾಹ ತಡೆಗಟ್ಟಿ, ತಾಯಿ ಮರಣ, ಶಿಶುಮರಣ ನಿಯಂತ್ರಿಸಿ. ಧೂಮಪಾನ ಮದ್ಯಪಾನ ಕೆಟ್ಟ ಚಟಗಳಿಂದ ದೂರವಿರಿ. ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಕ್ಯಾನ್ಸರ್‍ನಿಂದ ಮುಕ್ತರಾಗಿ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸುತ್ತ-ಮುತ್ತ ಸ್ವಸಹಾಯ ಸಂಘದ ಸದಸ್ಯರು ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಮೇಲ್ವಿಚಾರಕ ಶಿವಕುಮಾರ್, ಜ್ಞಾನವಿಕಾಸ ಘಟಕದ ಚಂದ್ರಕಲಾ, ಅಂಗನವಾಡಿ ಕಾರ್ಯಕರ್ತೆಯರಾದ ಅಸ್ಮಾ ಬಾನು, ಹಸೀನಾ, ಸ್ವಸಹಾಯ ಸಂಘದ 45 ಜನ ಸದಸ್ಯರ ಇದ್ದರು.