ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ,(ಅ.11) : ಸಾವಿರಾರು ಗಿಡ ನೆಟ್ಟು ಮರಗಳನ್ನಾಗಿ ಬೆಳೆಸಿದ ಪರಿಸರ ಪ್ರೇಮಿ ವೀರಾಚಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುವ ಅಕ್ರಮ ಭ್ರಷ್ಟಾಚಾರದ ವಿರುದ್ದ ಹೋರಾಡಿ ನ್ಯಾಯ ಸಿಗಲಿಲ್ಲವೆನ್ನುವ ಕಾರಣಕ್ಕಾಗಿ ಸೆ.20 ರಂದು ಹರಿಹರ ತಾಲ್ಲೂಕಿಗೆ ಸೇರಿದ ಮಿಟ್ಲಕಟ್ಟೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಅ.10 ರಿಂದ ರಾಜ್ಯಾದ್ಯಂತ ಆಪರೇಷನ್ ವೀರಾಚಾರಿ ಕಾರ್ಯಾಚರಣೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಸಂಚಾಲಕ ಮಹೇಶ್ ಸಿ.ನಗರಂಗೆರೆ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಿಟ್ಲಕಟ್ಟೆಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಯಲ್ಲಾಗುತ್ತಿರುವ ಮೋಸದ ವಿರುದ್ದ ಕಳೆದ ಐದಾರು ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದ ಸಾಲುಮರದ ವೀರಾಚಾರಿ ಒತ್ತಡಕ್ಕೆ ಮಣಿದು ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಅಮಾನತ್ತುಗೊಳಿಸಲಾಗಿತ್ತು.
ದಾವಣಗೆರೆ ಜಿಲ್ಲೆ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ ಹರಿಹರ ತಹಶೀಲ್ದಾರ್‍ರವರ ಲಿಖಿತ ದೂರು ಮತ್ತು ಆಕ್ಷೇಪಣೆಯನ್ನು ಬದಿಗೊತ್ತಿ ಜೂನ್ 6 ರಂದು ನ್ಯಾಯಬೆಲೆ ಅಂಗಡಿಯ ಪರವಾನಗಿ ಅಮಾನತ್ತಿನಲ್ಲಿರುವುದನ್ನು ರದ್ದುಪಡಿಸಿ ಮತ್ತೆ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಅನುಮತಿ ನೀಡಿದ್ದರಿಂದ ಮನನೊಂದು ಸಾಲುಮರದ ವೀರಾಚಾರಿ ಆತ್ಮಹತ್ಯೆಗೆ ಶರಣಾಗಬೇಕಾಯಿತು. ಇವರ ಸ್ಮರಣಾರ್ಥವಾಗಿ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿನ ಅಕ್ರಮಗಳ ವಿರುದ್ದ ಹೋರಾಟ ನಡೆಸುವುದಾಗಿ ಹೇಳಿದರು.
ತಾಲ್ಲೂಕು ಸಂಚಾಲಕ ಅಂಜಿನಪ್ಪ, ನಾಗಿರೆಡ್ಡಿ ಬೇಡರೆಡ್ಡಿಹಳ್ಳಿ, ರಾಮಚಂದ್ರಪ್ಪ, ವೆಂಕಟೇಶ್, ನಿರಂಜನಮೂರ್ತಿ, ಶೇಖರಪ್ಪ, ಬಾಬು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.