ಮೈಸೂರು: ಪ್ರೊ. ಕೆ ಎಸ್ ಭಗವಾನ್ ಅವರ ಹೇಳಿಕೆಯನ್ನು ಖಂಡಿಸಿ, ಒಕ್ಕಲಿಗರು ಅವರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕುವೆಂಪು ನಗರದಲ್ಲಿರುವ ಅವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಹೇಳಿಕೆಗೆ ಆಕ್ರೋಶ ಹೊರ ಹಾಕಿದ್ದಾರೆ.
ಭಗವಾನ್ ವಿರುದ್ಧ ಕೆಂಡಾಮಂಡಲರಾಗಿರುವ ಒಕ್ಕಲಿಗರು, ಭಗವಾನ್ ಯಾವ ಸಮಾಜಕ್ಕೆ ಹುಟ್ಟಿದ್ದಾನೆಂದು ಮೊದಲು ಹೇಳಲಿ. ನಮಗೆ ಸಂಸ್ಕೃತಿ ಇಲ್ಲ ಎಂದು ಹೇಳಿದ್ದಾನೆ. ಭಗವಾನ್ ಬಂದು ನಮಗೆ ಸಂಸ್ಕೃತಿಯ ಪಾಠ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಅವರ ನಿವಾಸದ ಎದುರು ಪ್ರತಿಭಟನೆ ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಮೈಸೂರಿನಲ್ಲಿ ನಿನ್ನೆ ಮಾತನಾಡಿದ್ದ ಕೆ ಎಸ್ ಭಗವಾನ್ ಅವರು, ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು. ಇದನ್ನು ನಾನು ಹೇಳುತ್ತಿಲ್ಲ, ಕುವೆಂಪು ಅವರು ಈ ಹಿಂದೆ ಹೇಳಿದ್ದರು. ಇಲ್ಲದಿದ್ದರೆ ನನಗೆ ಹೊಡೆಯಲು ಬರುತ್ತಾರೆ. ನನ್ನನ್ನು ಕೊಂದು ಹಾಕಲು ಬರುತ್ತಾರೆ. ಆದರೆ ನಿಜ ಹೇಳಿಯೇ ಸಾಯಬೇಕು ಎಂದಿದ್ದರು. ಕುವೆಂಪು ಅವರ ಮಾತು ಅವರ ಶಿಷ್ಯಂದಿರಿಗೆ ಈಗಲೂ ಅರ್ಥವಾಗಿಲ್ಲ. ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಹಾಕದವನು ಒಂದು, ಹಾಕದೆ ಇರುವವನು ಇನ್ನೊಂದು. ಕೈಗೆ ಕಾಲಿಗೆ ಜಾತಿ ಇಟ್ಟಿರುವುದು ಹಿಂದೂ ಧರ್ಮ ಎಂದು ಹೇಳಿದ್ದರು. ಈ ಹೇಳಿಕೆಗೆ ಈಗ ಒಕ್ಕಲಿಗರ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ.