ವಿಜಯಪುರ : ಡಿಸೆಂಬರ್ ನಲ್ಲಿ ರಾಜ್ಯಾದ್ಯಂತ ರಸ್ತೆಗಳ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಹೇಳಿದರು.
ಬೈ ಎಲೆಕ್ಷನ್ ನಲ್ಲಿ ಜಾತಿ ರಾಜಕಾರಣ ಪ್ರಸ್ತಾಪಿಸುವುದು ಸರಿಯಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ.
ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಲು ಮುಖ್ಯಮಂತ್ರಿಗಳು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಜಯಪ್ರಕಾಶ ಹೆಗಡೆ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದಾರೆ. ಮೂರ್ನಾಲ್ಕು ಸಮಾಜಗಳ ಬೇಡಿಕೆ ಇದೇ ರೀತಿ ಇದೇ. ಎಲ್ಲವನ್ನು ಕ್ರೋಢಿಕರಿಸಿ, ಪರಿಶೀಲಿಸಿ ನಮ್ಮ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದರು.
ಸಿಂದಗಿ ಮತ್ತು ಹಾನಗಲ್ ಮತಕ್ಷೇತ್ರದ ಮತದಾರ ಪ್ರಭುಗಳು ಬಿಜೆಪಿ ಬೆಂಬಲಿಸಲಿದ್ದಾರೆ. ಈ ಚುನಾವಣೆಯಲ್ಲಿ ಪರಿಸ್ಥಿತಿಯ ಲಾಭ ತೆಗೆದುಕೊಳ್ಳಲು ವಿಜಯಾನಂದ ಕಾಶಪ್ಪನವರ ಪ್ರಯತ್ನಿಸುವುದಿಲ್ಲ ಎಂಬ ನಂಬಿಕೆಯಿದೆ. ನಮಗಿಂತಲೂ ಮುಂಚೆ ಅವರೇ ಅಧಿಕಾರದಲ್ಲಿದ್ದರು. ಆಗ ಯಾಕೆ ಮೀಸಲಾತಿ ಧ್ವನಿ ಎತ್ತಲಿಲ್ಲ? ಎಂದು ಪ್ರಶ್ನಿಸಿದ ಸಿ. ಸಿ. ಪಾಟೀಲ, ನಮ್ಮ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ.
ಈಗಾಗಲೇ ಮುಖ್ಯಮಂತ್ರಿಗಳು ಕೂಡಲಸಂಗಮ ಸ್ವಾಮಿಗಳ ಜೊತೆ ಒಂದು ಗಂಟೆ 10 ನಿಮಿಷ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಸ್ವಾಮೀಜಿಗಳು ಈ ಸಭೆಯಿಂದ ಸಂತೃಪ್ತರಾಗಿದ್ದಾರೆ. ಅಂದು ಕಾಶಪ್ಪನವರ ಕೂಡ ಸಮಾಧಾನ ವ್ಯಕ್ತಪಡಿಸಿದ್ದರು. ಈಗ ಅವರು ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ಸಚಿವರು ತಿಳಿಸಿದರು.