ಮಾರ್ಚ್ 9ರಿಂದ ಪರೀಕ್ಷೆಗಳು ಶುರುವಾಗುವ ನಿರೀಕ್ಷೆಗಳಿವೆ. ಹೀಗಾಗಿ ರಾಜ್ಯದ ಮುಸ್ಲಿಂ ವಿದ್ಯಾರ್ಥಿನಿಯರು ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪರೀಕ್ಷೆಯಲ್ಲಿ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ಗಲಾಟೆ ಎಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕುಂದಾಪುರದ ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್ ಗಲಾಟೆ, ರಾಜ್ಯ, ರಾಷ್ಟ್ರವನ್ನು ಆವರಿಸಿತ್ತು. ಇದೀಗ ಮತ್ತೆ ಅದರ ಸದ್ದು ಕೇಳುವ ಸಾಧ್ಯತೆ ಇದೆ. ಜೊತೆಗೆ ಚುನಾವಣೆ ಹೊಸ್ತಿಲಲ್ಲಿಯೇ ಮುಸ್ಲಿಂ ವಿದ್ಯಾರ್ಥಿನಿಯರು ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿರುವುದು ಸರ್ಕಾರಕ್ಕೂ ತಲೆ ನೋವಾಗಬಹುದು.
ಪಿಯು ಪರೀಕ್ಷೆಗಳು ಮಾರ್ಚ್ ನಿಂದ ಶುರುವಾಗುವ ನಿರೀಕ್ಷೆ ಇದ್ದು ಹಿಜಾಬ್ ವಿಚಾರವನ್ನು ತುರ್ತು ವಿಚಾರಣೆ ನಡೆಸಲು ವಿದ್ಯಾರ್ಥಿನಿಯರು ಕೋರಿದ್ದರು. ಅದಕ್ಕೆ ಸಿಜೆಐ ಚಂದ್ರಚೂಡ್ ಸಮ್ಮತಿ ಸೂಚಿಸಿದ್ದಾರೆ. ಪರೀಕ್ಷೆಗೆ ಯಾರು ಅನುಮತಿ ಕೊಡುತ್ತಿಲ್ಲ ಎಂದು ಸಿಜೆಐ ಪ್ರಶ್ನಿಸಿದ್ದಾರೆ.ಇದಕ್ಕೆ ಉತ್ತರಿಸಿದ ವಿದ್ಯಾರ್ಥಿನಿಯರ ಪರ ವಕೀಲ, ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿಸುತ್ತಿಲ್ಲ. ನಮ್ಮ ಹೆಣ್ಣು ಮಕ್ಕಳು ಕೂಡ ಹಿಜಾಬ್ ಇಲ್ಲದೆ ಪರೀಕ್ಷೆ ಬರೆಯಲು ಒಪ್ಪುತ್ತಿಲ್ಲ ಎಂದಿದ್ದಾರೆ.