ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಡಿ.09) : ಈ ಬಾರಿ ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿ ಆಚರಣೆ ಇದೇ ಡಿಸೆಂಬರ್ 18 ರಂದು ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ (ಮುರುಘರಾಜೇಂದ್ರ ಕ್ರೀಡಾಂಗಣ) ನಡೆಯಲಿದ್ದು, ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಆಚರಿಸುವ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ ಹಾಗೂ ಛಲವಾದಿ ಮಹಾಸಭಾದ ವತಿಯಿಂದ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಆಚರಿಸಲಾಗುತ್ತಿದ್ದು, ಮುಖ್ಯಮಂತ್ರಿಗಳು ಸಮಾರಂಭದ ಉದ್ಘಾಟನೆಗೆ ಆಗಮಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಮಾತನಾಡಿ, ಒನಕೆ ಓಬವ್ವನ ಧೈರ್ಯ, ಸಾಹಸ ಹಾಗೂ ಸಮಯಪ್ರಜ್ಞೆ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ.
ಓಬವ್ವನ ಕುರಿತು ಎಲ್ಲರೂ ಅರಿತುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವು ಇದೇ ಡಿಸೆಂಬರ್ 18 ರಂದು ನಿಗದಿಪಡಿಸಲಾಗಿದ್ದು, ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಚಿತ್ರದುರ್ಗದಲ್ಲಿ ಆಚರಿಸಲು ಅವಕಾಶ ದೊರೆತಿರುವುದು ನಮಗೆ ಹೆಮ್ಮೆ ತರುವ ವಿಷಯವಾಗಿದೆ.
ಜಯಂತಿ ಆಚರಣೆ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಕನಕವೃತ್ತದಿಂದ ಮುರುಘರಾಜೇಂದ್ರ ಕ್ರೀಡಾಂಗಣದವರೆಗೂ ಭವ್ಯ ಮೆರವಣಿಗೆ ಏರ್ಪಡಿಸಲಾಗುವುದು. ಒನಕೆ ಓಬವ್ವ ಜಯಂತಿ ಆಚರಣೆಯನ್ನು ನಮ್ಮ ಮನೆಯ ಕಾರ್ಯಕ್ರಮವೆಂದು ಭಾಗವಹಿಸಿ, ಎಲ್ಲ ಸಮಾಜದವರು, ಸಂಘಟನೆಗಳು, ಸಮುದಾಯ, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದರು.
ಕಾರ್ಯಕ್ರಮ ಡಿ. 18 ಕ್ಕೆ ನಿಗದಿಯಾಗಿರುವುದರಿಂದ, ಕಾಲಾವಕಾಶ ಕಡಿಮೆ ಇದೆ. ಹೀಗಾಗಿ ತುರ್ತಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಂಡು, ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಹಾಗೂ ಸಮುದಾಯದ ಮುಖಂಡರ ಸಹಕಾರದೊಂದಿಗೆ ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಈಗಾಗಲೇ ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ವೇದಿಕೆ ನಿರ್ಮಾಣ ಸೇರಿದಂತೆ ಅಗತ್ಯ ಪೂರ್ವಸಿದ್ಧತೆಗಳು ನಡೆಯುತ್ತಿವೆ. ಜಯಂತಿ ಆಚರಣೆಗೆ ಸಂಬಂಧಪಟ್ಟಂತೆ ಈಗಾಗಲೇ ವೇದಿಕೆ ಹಾಗೂ ಸಂಘಟನಾ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕøತಿಕ ಸಮಿತಿ, ಸಾರಿಗೆ ಸಮಿತಿ, ಮಾಧ್ಯಮ ಸಮಿತಿ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಯ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು ತಮ್ಮ ತಮ್ಮ ಹಂತದಲ್ಲಿ ಸಭೆ ನಡೆಸಿ, ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದ ಅವರು, ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆ ಮುದ್ರಿಸಬೇಕು.
ಸಮಾರಂಭದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಭಾಗವಹಿಸಬೇಕು. ಎಲ್ಲ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಸೇರಿದಂತೆ ಎಲ್ಲರೂ ಒಟ್ಟಾಗಿ ಸೇರಿ ಚಿತ್ರದುರ್ಗದಲ್ಲಿ ನಡೆಯುವ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿ ಯಶಸ್ವಿಗೊಳಿಸೋಣ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಹನೀಯರ ಪುತ್ಥಳಿಗಳಿಗೆ ಹೂವಿನ ಅಲಂಕಾರ: ಒನಕೆ ಓಬವ್ವ ಜಯಂತಿ ಅಂಗವಾಗಿ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಲಿದ್ದು, ಕನಕ ವೃತ್ತದಿಂದ ಮದಕರಿ ವೃತ್ತದವರೆಗೂ ಇರುವ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿರುವ ಎಲ್ಲ ಮಹನೀಯರ ಪುತ್ಥಳಿಗಳಿಗೆ ಹೂವಿನ ಅಲಂಕಾರ ಮಾಡಬೇಕು, ಅಲ್ಲದೆ ವೃತ್ತಗಳನ್ನು ಅಲಂಕರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ: ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸುವುದರಿಂದ ಜನರಿಗೆ ಹಾಗೂ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು, ಅಗತ್ಯ ಬಿದ್ದಲ್ಲಿ, ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮಾರ್ಗ ಬದಲಾವಣೆಗೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಮುದಾಯದ ಭಾರ್ಗವಿ ದ್ರಾವಿಡ್ ಮಾತನಾಡಿ, ಒನಕೆ ಓಬವ್ವ ಜಯಂತಿಯ ಮೆರವಣಿಗೆಗೆ ಜಿಲ್ಲೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲು ಕ್ರಮವಹಿಸಬೇಕು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ, ಜಿಲ್ಲೆಯ ಪ್ರೌಢಾಶಾಲೆಯ ಸುಮಾರು 400 ರಿಂದ 500 ವಿದ್ಯಾರ್ಥಿಗಳು ಒನಕೆ ಓಬವ್ವ ಅವರ ವೇಷಭೂಷಣದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಅವರು, ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭದೊಂದಿಗೆ ಭಾಗವಹಿಸಲು ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.
ರಾಜ್ಯಸಭಾ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಮಾತನಾಡಿ, ಸರ್ಕಾರದ ವತಿಯಿಂದ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿ, ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ ಮಾತನಾಡಿ, ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 9ಕ್ಕೆ ನಗರದ ಕನಕ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ನೀಡಿ, ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲು ಅಗತ್ಯ ಕ್ರಮ ವಹಿಸಬೇಕು. ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಗಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುವಂತಾಗಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ, ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಛಲವಾದಿ ಸಮುದಾಯದ ಮುಖಂಡರು ಇದ್ದರು.