ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಫೆ.23): ಚಿತ್ರದುರ್ಗ ಸ್ಪೋಟ್ರ್ಸ್ ಕ್ಲಬ್, ಚಿತ್ರದುರ್ಗ ಕಬಡ್ಡಿ ಪ್ರೀಮಿಯರ್ ಲೀಗ್, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ ಪ್ರೋ ಮಾದರಿಯ 22 ವರ್ಷದೊಳಗಿನ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಫೆ.24 ರಿಂದ 26 ರವರೆಗೆ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಪಿ.ಸಿ.ಮುರುಗೇಶ್ ತಿಳಿಸಿದರು.
ಪಂದ್ಯಾವಳಿ ನಡೆಯುವ ಮೈದಾನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಂದ್ಯಾವಳಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ 190 ಅರ್ಜಿಗಳು ಬಂದಿದ್ದು, ಅಂತಿಮವಾಗಿ 72 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಯಿತು.
ರವೀಂದ್ರಕುಮಾರ್ ರಾಥೋಡ್, ಚಿತ್ರದುರ್ಗ ಡೆವಿಲ್ಸ್, ರಂಗಸ್ವಾಮಿ ಯುವರತ್ನ ತಂಡ, ದೇವರಾಜ್, ಕ್ರಾಂತಿ ದರ್ಶನ್, ಚೇತನ್ ಮದಕರಿ ಸೂಪರ್ ಕಿಂಗ್ಸ್, ಧರ್ಮ ಡಿ.ವಿ.ಎಸ್.ಕಬಡ್ಡಿ ಬಾಯ್ಸ್, ಪುನೀತ್ ಕಂತಕ ಇವರುಗಳು ತಂಡದ ಮಾಲೀಕರಾಗಿದ್ದಾರೆ.
30 ಸಾವಿರ ರೂ.ಗಳಿಗೆ ಆಟಗಾರರನ್ನು ಹರಾಜು ಮಾಡಲಾಗಿದ್ದು, ಪ್ರತಿ ತಂಡಕ್ಕೆ ಇಬ್ಬರು ಐಕಾನ್ ಆಟಗಾರರಿಗೆ ನಾಲ್ಕು ಸಾವಿರ ರೂ.ಗಳನ್ನು ನಿಗಧಿಪಡಿಸಿ ಉಳಿದ 22 ಸಾವಿರ ರೂ.ಗಳಲ್ಲಿ ಹತ್ತು ಆಟಗಾರರನ್ನು ಖರೀಧಿ ಮಾಡಿದ್ದಾರೆ. ಇವರಲ್ಲಿ ಎ.ಬಿ.ಮತ್ತು ಸಿ. ಗ್ರೇಡ್ ಆಟಗಾರರನ್ನಾಗಿ ವಿಂಗಡಿಸಿ ಎ.ಗ್ರೇಡ್ ಆಟಗಾರರಿಗೆ ಮೂಲ ಬೆಲೆ ಎರಡು ಸಾವಿರ, ಬಿ.ಗ್ರೇಡ್ ಆಟಗಾರರಿಗೆ ಒಂದು ಸಾವಿರದ ಐದುನೂರು, ಸಿ.ಗ್ರೇಡ್ ಆಟಗಾರರಿಗೆ ಒಂದು ಸಾವಿರ ರೂ.ಗಳಿಗೆ ಮಾಲೀಕರು ಆಟಗಾರರನ್ನು ಖರೀದಿಸಿರುತ್ತಾರೆಂದು ಹೇಳಿದರು.
ಪ್ರಥಮ ಬಹುಮಾನ ಐವತ್ತು ಸಾವಿರ ರೂ. ದ್ವೀತಿಯ ಬಹುಮಾನ 40 ಸಾವಿರ ರೂ. ತೃತೀಯ ಬಹುಮಾನ 30 ಸಾವಿರ ರೂ. ನಾಲ್ಕನೆ ಬಹುಮಾನ 20 ಸಾವಿರ ರೂ.ಗಳನ್ನು ನೀಡಿ ಕಬಡ್ಡಿಪಟುಗಳನ್ನು ಪ್ರೋತ್ಸಾಹಿಸಲಾಗುವುದು.
ಬೆಸ್ಟ್ ಕ್ಯಾಚರ್, ಬೆಸ್ಟ್ ಆಲ್‍ರೌಂಡರ್‍ಗೆ ಸ್ಪೋಟ್ರ್ಸ್ ಸೈಕಲ್‍ಗಳನ್ನು ನೀಡಲಾಗುವುದು. ಕಬಡ್ಡಿ ಪಂದ್ಯಾವಳಿಯನ್ನು ವೀಕ್ಷಿಸಲು ಇದೆ ಮೊದಲ ಬಾರಿಗೆ ಬೆಳಗಾವಿಯ ಚಿಂಚೋಳಿಯಿಂದ ಗ್ಯಾಲರಿಗಳ ತರಿಸಿ ಅಳವಡಿಸಲಾಗಿದೆ.
24 ರಂದು ಸಂಜೆ 7 ಗಂಟೆಗೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪಂದ್ಯಾವಳಿ ಉದ್ಘಾಟಿಸಲಿದ್ದು, ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆಂದು ತಿಳಿಸಿದರು.
26 ರಂದು ಸಂಜೆ ಏಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸುವರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್ ಇವರುಗಳು ಆಗಮಿಸಲಿದ್ದಾರೆ.
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಒಟ್ಟು ಹತ್ತೊಂಬತ್ತು ಪಂದ್ಯಗಳು ನಡೆಯಲಿದ್ದು, ಹದಿನಾರು ಮಂದಿ ತೀರ್ಪುಗಾರರು ಕಾರ್ಯನಿರ್ವಹಿಸಲಿದ್ದಾರೆಂದು ಪಿ.ಸಿ.ಮುರುಗೇಶ್ ವಿವರಿಸಿದರು.
ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್, ಸತೀಶನಾಯಕ, ಕೆ.ಸಿ.ಜಗದೀಶ್, ಡಿ.ನಾಗಭೂಷಣ್, ನಾಯ್ಡು ಇವರುಗಳು ಪತ್ರಿಕಾಗೋಷ್ಠಿಯಲ್ಲಿದ್ದರು.