ಕುವೆಂಪು ಅವರದ್ದು ಅಪಾರವಾದಂತ ಸಾಹಿತ್ಯ ಕೃಷಿ. ಅವರ ಪುಸ್ತಕಗಳ ಅಭಿಮಾನಿಗಳು ಕಡಿಮೆ ಏನು ಇಲ್ಲ. ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಗಬೇಕು ಎಂಬುದು ಅವರ ಅಭಿಮಾನಿಗಳ ಆಸೆ. ಅದಕ್ಕೆ ಪುಷ್ಠಿಯಾಗಿ ರಾಜ್ಯ ಸರ್ಕಾರ ಇದೀಗ ಕೇಂದ್ರಕ್ಕೆ ಮನವಿ ಮಾಡುವುದಕ್ಕೆ ನಿರ್ಧಾರ ಮಾಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆದಿದೆ. ಈ ಸಭೆಯಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡುವುದಕ್ಮೆ ತೀರ್ಮಾನ ಕೈಗೊಳ್ಳಲಾಗಿದೆ. ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಲಿದೆ.
ರಾಜ್ಯದ ಕ್ಯಾಬಿನೆಟ್ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಈ ಸಂಬಂಧ ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕಿದೆ. 2024ರಲ್ಲಿ ಕೇಂದ್ರದ ಮೋದಿ ಸರ್ಕಾರವು ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್, ಬಿಜೆಪಿಯ ಬೀಷ್ಮ ಎಲ್.ಕೆ.ಅಡ್ವಾಣಿ, ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್, ಮಾಜಿ ಪ್ರಧಾನಿ ಪಿವಿ ನರಸಿಂಹರಾವ್, ಚೌದರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿತ್ತು. ಕರ್ನಾಟಕದಿಂದ ಇದುವರೆಗೂ ಸರ್ ಎಂ ವಿಶ್ವೇಶ್ವರಯ್ಯ, ಭೀಮಸೇನ ಜೋಶಿ ಹಾಗೂ ಸಿಎನ್ ಆರ್ ರಾವ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದೆ.
ಈಗಾಗಲೇ ರಾಜ್ಯ ಸರ್ಕಾರ ಸಿದ್ದಗಂಗಾ ಶ್ರೀಗಳ ವಿಚಾರದಲ್ಲೂ ಮನವಿ ಮಾಡಿದೆ. ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಮನವಿ ಮಾಡಿದೆ. ಆದರೂ ನೀಡಿಲ್ಲ. ಈ ಬಾರಿ ಕುವೆಂಪು ಅವರಿಗಾದರೂ ನೀಡುತ್ತಾ ನೋಡಬೇಕಿದೆ.

