ಸುದ್ದಿಒನ್,ಬೆಂಗಳೂರು,ಮೇ.11: ಕೇಂದ್ರ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಮತ್ತು ಕಿಡಿಗೇಡಿಗಳ ಅಹಿತಕರ ಕೃತ್ಯಗಳಿಗೆ ಪೂರ್ಣವಿರಾಮ ಹಾಕಲು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರಾಜ್ಯದ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಪ್ಲಾಸ್ಟಿಕ್ ಬಾಟಲಿ, ಕ್ಯಾನ್ ಅಥವಾ ಯಾವುದೇ ಬಿಡಿ ಪಾತ್ರೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಮತ್ತು ಜನರ ಸುರಕ್ಷತೆಯ ದೃಷ್ಟಿಯಿಂದ ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಗಲಭೆ ಹಾಗೂ ಹಿಂಸಾಚಾರದ ವೇಳೆ ಕಿಡಿಗೇಡಿಗಳು ಬಾಟಲಿಗಳಲ್ಲಿ ಪೆಟ್ರೋಲ್ ಪಡೆದು ‘ಪೆಟ್ರೋಲ್ ಬಾಂಬ್’ ತಯಾರಿಸಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ತಡೆಯುವುದು ಈ ನಿಯಮದ ಪ್ರಮುಖ ಆದ್ಯತೆ. ಬೆಂಕಿ ಹಚ್ಚುವಂತಹ ಅಮಾನವೀಯ ಕೃತ್ಯಗಳಿಗೆ ಬಿಡಿ ಇಂಧನ ಬಳಕೆಯಾಗುವುದನ್ನು ತಪ್ಪಿಸುವುದು. ಮನೆಗಳಲ್ಲಿ ಬಾಟಲಿಗಳಲ್ಲಿ ಇಂಧನ ಸಂಗ್ರಹಿಸಿಡುವುದು ಅಪಾಯಕಾರಿ. ಆಕಸ್ಮಿಕ ಬೆಂಕಿ ಅವಘಡಗಳನ್ನು ತಡೆಗಟ್ಟಲು ಇದು ಪೂರಕವಾಗಲಿದೆ.

ಪೆಟ್ರೋಲ್ ಬಂಕ್‌ಗಳಿಗೆ ಕಟ್ಟುನಿಟ್ಟಿನ ಸೂಚನೆಗಳು
ಪೊಲೀಸ್ ಇಲಾಖೆಯು ಬಂಕ್ ಮಾಲೀಕರಿಗೆ ಈಗಾಗಲೇ ಸ್ಪಷ್ಟ ಎಚ್ಚರಿಕೆಗಳನ್ನು ನೀಡಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಕಾದಿದೆ.ವಾಹನಗಳ ಟ್ಯಾಂಕ್‌ಗೆ ನೇರವಾಗಿ ಇಂಧನ ತುಂಬಿಸಲು ಮಾತ್ರ ಅವಕಾಶವಿರುತ್ತದೆ.ನಿಯಮ ಮೀರಿ ಬಾಟಲಿಗಳಲ್ಲಿ ಇಂಧನ ನೀಡಿದರೆ ಬಂಕ್ ಮಾಲೀಕರು ಮತ್ತು ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.ನಿಯಮ ಉಲ್ಲಂಘನೆ ಮರುಕಳಿಸಿದರೆ ಪೆಟ್ರೋಲ್ ಬಂಕ್‌ನ ಲೈಸೆನ್ಸ್ ಅನ್ನು ಕಾಯಂ ಆಗಿ ರದ್ದುಗೊಳಿಸಲಾಗುವುದು.
ಒಂದು ವೇಳೆ ರಸ್ತೆಯ ಮಧ್ಯೆ ವಾಹನ ಕೆಟ್ಟು ನಿಂತರೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಸೂಕ್ತ ಗುರುತಿನ ಚೀಟಿ ಹಾಗೂ ಸರಿಯಾದ ಕಾರಣ ನೀಡಿದಲ್ಲಿ ಮಾತ್ರ ಇಂಧನ ನೀಡಲು ಅವಕಾಶವಿದೆ. ಇದು ಬಂಕ್ ಮಾಲೀಕರ ವಿವೇಚನೆಗೆ ಒಳಪಟ್ಟಿರುತ್ತದೆ.










