ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 06 : ಕರ್ನಾಟಕದಲ್ಲಿ ಇಂದು ಮಂಡಿಸಲಾದ ರಾಜ್ಯ ಬಜೆಟ್ ಮಹಿಳೆಯರಿಗೆ ಭ್ರಮನಿರಸನ ಉಂಟುಮಾಡಿದೆ ಎಂದು ಎಐಎಂಎಸ್ಎಸ್ ರಾಜ್ಯ ಕಾರ್ಯದರ್ಶಿ ಶೋಭಾ ಅವರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು,
ಹದಿಹರೆಯದ ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವವನ್ನು ತಡೆಗಟ್ಟುವ ದಿಕ್ಕಿನಲ್ಲಿ 16 ವಯಸ್ಸಿನವರೆಗೆ ಮೊಬೈಲ್ ಬಳಕೆಯನ್ನು ವಿದ್ಯಾಸಂಸ್ಥೆಗಳಲ್ಲಿ ನಿಷೇಧಿಸಿರುವುದು ಸ್ವಾಗತಾರ್ಹವಾಗಿದೆ. ಈ ಮೊಬೈಲ್ ಗೀಳನ್ನು ತಪ್ಪಿಸಲು ಸರ್ಕಾರ “ಈ- ಕಮಿಷನ್” ಸ್ಥಾಪಿಸಿ, ಮನೋತಜ್ಞರು, ಸುಚಿಂತಕರು, ಮಹಿಳಾ ಸಂಘಟನೆಗಳು, ಪೋಷಕರೂ ಒಳಗೊಂಡಂತೆ ವಿಸ್ತೃತ ಸಭೆ ಕರೆಸಿ ಸಲಹೆಗಳನ್ನು ಆಹ್ವಾನಿಸಬೇಕು.
ಸರ್ಕಾರದ ಮಾತೃಪೂರ್ಣ ಯೋಜನೆ ಅಡಿ ಗರ್ಭಿಣಿ ಮಹಿಳೆಯರಿಗೆ “ಟೇಕ್ ಹೋಮ್ ರೇಷನ್” ಯೋಜನೆ ಕೈ ಬಿಟ್ಟಿರುವುದು ವಿಷಾದನೀಯ. ಈ ರದ್ಧತಿಯಿಂದ ಎಷ್ಟೋ ಮಹಿಳೆಯರು ವಂಚಿತರಾಗುತ್ತಾರೆ.
“ಇಂದಿರಾ ಆಹಾರ ಕಿಟ್” ಯೋಜನೆ ಅಡಿಯಲ್ಲಿ ಕೊಡುತ್ತಿದ್ದ 5 ಕಿಲೋ ಅಕ್ಕಿ ರದ್ದು ಮಾಡಿರುವುದನ್ನು ಖಂಡಿಸುತ್ತದೆ. ತೊಗರಿ ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಕೊಡುವುದರ ಜೊತೆಗೆ ಅಕ್ಕಿಯನ್ನು ಕೊಡಬೇಕೆಂದು ಅಗ್ರಹಿಸುತ್ತದೆ.
ಸಮಾಜದ ಆರೋಗ್ಯ ಮಾತೆಯರಾದ ಆಶಾ ಕಾರ್ಯಕರ್ತೆಯರ ಬಗ್ಗೆ ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಇಲ್ಲದಿರುವುದು ವಿಷಾದನೀಯ.
ರಾಜ್ಯಾದ್ಯಂತ ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗುತ್ತಿದ್ದು ಪ್ರಜಾತಾಂತ್ರಿಕ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಈ ಅನಿಷ್ಟಕ್ಕೆ ಕಡಿವಾಣ ಹಾಕಲು “ಮಾನ್ಯ ಕಾಯ್ದೆ” ತರುತ್ತೇವೆಂದು ಹೇಳಿದ ಸರ್ಕಾರದ ಮಾತು ಕೇವಲ ಆಶ್ವಾಸನೆಯಾಗಿಯೇ ಉಳಿದಿದೆ.
ಒಟ್ಟಾರೆಯಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ವಿತ್ತ ಮಂತ್ರಿಗಳೂ ಆದ ಶ್ರೀಯುತ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ನಲ್ಲಿ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗಕ್ಕೆ ಯಾವುದೇ ಹೊಸ ಯೋಜನೆಗಳು ಇಲ್ಲವಾಗಿವೆ. ಮಹಿಳಾ ಸಮುದಾಯಕ್ಕೆ ಇದು ನಿರಾಶದಾಯಕ ಬಜೆಟ್ ಎಂದು ಎಐಎಂಎಸ್ಎಸ್ ರಾಜ್ಯ ಕಾರ್ಯದರ್ಶಿ ಶೋಭಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












