ಸುದ್ದಿಒನ್, ಚಿತ್ರದುರ್ಗ, ಜನವರಿ. 20 : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರು ಜಿಲ್ಲಾ ಘಟಕದ ಸಹಯೋಗದೊಂದಿಗೆ ತುಮಕೂರಿನಲ್ಲಿ ನಡೆದ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ‘ಪಬ್ಲಿಕ್ ಟಿವಿ’ಯ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ಪಿ ನಾಗರಾಜ್ ಅವರು ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತುಮಕೂರಿನಲ್ಲಿ ಭಾನುವಾರ ನಡೆದ 39ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ವಿದ್ಯುನ್ಮಾನ ವಿಭಾಗದಲ್ಲಿ ಸಾಮಾಜಿಕ ಮಾನವೀಯ ವರದಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಪ್ರಶಸ್ತಿ ಪ್ರದಾನ ಮಾಡಿದರು.

ಕೆ.ಪಿ ನಾಗರಾಜ್ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಕೆ.ಪಿ.ನಾಗರಾಜ್ ಮೂಲತಃ ಚಿತ್ರದುರ್ಗದ ನಿವಾಸಿ . ನಾಯಕನಹಟ್ಟಿಯ ಹೋಬಳಿ ಎನ್.ಗೌರೀಪುರ ಇವರ ಹುಟ್ಟೂರು.
ಪ್ರಾಥಮಿಕ ಶಿಕ್ಷಣವನ್ನು ಚಿತ್ರದುರ್ಗದ ದೊಡ್ಡಪೇಟೆಯ ಸಂಪಿಗೆ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಕೋಟೆ ಪ್ರೌಢಶಾಲೆ, ಚಂದ್ರವಳ್ಳಿಯ ಎಸ್‌ಜೆಎಂ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದ್ದಾರೆ.
ಕಾಲೇಜು ದಿನದಿಂದಲೇ ಸುದ್ದಿಗಿಡುಗ, ಪ್ರಜಾಪ್ರಗತಿ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ, ಅಪರಾಧ ಶಾಸ್ತ್ರ ಹಾಗೂ ಸಾರ್ವಜನಿಕ ಆಡಳಿತ ವಿಷಯದಲ್ಲಿ ಪದವಿ ಪೂರ್ಣಗೊಳಿಸಿ ಬಳಿಕ ಮಾನಸ ಗಂಗೋತ್ರಿಯ ಸಂವಹನ ಪತ್ರಿಕೋದ್ಯಮ ವಿಭಾಗದಲ್ಲಿ ಸಾತ್ನಕೋತ್ತರ ಪದವಿ ಪಡೆದಿದ್ದಾರೆ.
ಮೈಸೂರಿನ ಕನ್ನಡಪ್ರಭದ ವರದಿಗಾರನಾಗಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದ ಕೆ.ಪಿ.ನಾಗರಾಜ್ ಕೋಲಾರದಲ್ಲಿ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಎಚ್.ಆರ್.ರಂಗನಾಥ್ ತಂಡದೊಂದಿಗೆ ಸುವರ್ಣ ನ್ಯೂಸ್ ಮೂಲಕ ಮೈಸೂರು ಹಿರಿಯ ವರದಿಗಾರನಾಗಿ ವಿದ್ಯುನ್ಮಾನ ಮಾಧ್ಯಮಕ್ಕೆ ಪ್ರವೇಶಿಸಿದರು. ಎಚ್.ಆರ್.ರಂಗನಾಥ್ ಸಾರಥ್ಯದಲ್ಲಿ ಪಬ್ಲಿಕ್ ಟಿವಿಗೆ ಆಗಮಿಸಿದರು.
ಮೈಸೂರು, ದೆಹಲಿ ವಿಶೇಷ ಪ್ರತಿನಿಧಿಯಾಗಿದ್ದ ಇವರು ಗುಜರಾತ್ ಚುನಾವಣೆ, ಪುಲ್ವಾಮ ದುರಂತ, ವೈನಾಡು, ಕೊಡಗು ಭೂಕುಸಿತ ಸೇರಿದಂತೆ ದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳ ‘GROUND REPORT’ ಮಾಡಿದ ಹೆಗ್ಗಳಿಕೆ ಇವರದು. ರಾಜಕೀಯ ವಿಷಯದಲ್ಲಿ ಅತ್ಯಂತ ಕರಾರುವಕ್ಕಾದ ವಿಶ್ಲೇಷಣೆ ಇವರಿಗೆ ಕರಗತವಾಗಿದೆ.

