ಚಿತ್ರದುರ್ಗ, (ನ.19) : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಅನ್ನದಾತ ಅಕ್ಷರಶಃ ಕಂಗಾಲಾಗಿ ಹೋಗಿದ್ದಾನೆ. ಕೈಗೆ ಬಂದ ಫಸಲು ಮಳೆಯಿಂದಾಗಿ ನೀರು ಪಾಲಾಗಿ ರೈತರು ತತ್ತರಿಸಿ ಹೋಗಿದ್ದಾರೆ. ಬಿಡದೆ ಸುರಿಯುತ್ತಿರುವ ಮಳೆ ರೈತರ ಕಣ್ಣಲ್ಲಿ ನೀರು ತರಿಸಿದೆ.
ಕಳೆದ ಎಂಟು ಹತ್ತು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ನಿರಂತರ ಮಳೆಯ ಹೊಡೆತಕ್ಕೆ ಅನ್ನದಾತ ಅಕ್ಷರಶ ತತ್ತರಿಸಿ ನಲುಗಿ ಹೋಗಿದ್ದಾನೆ.
ಮೊಳಕಾಲ್ಮೂರು ತಾಲೂಕಿನ ಇತಿಹಾಸದಲ್ಲೇ ರೈತರು ಅನಾವೃಷ್ಟಿ ಕಂಡದ್ದೆ ಹೆಚ್ಚು. ಆದರೆ ಈ ಬಾರಿ ಅತಿವೃಷ್ಟಿಯಿಂದಾಗಿ ವಾರ್ಷಿಕ ವಾಣಿಜ್ಯ ಶೇಂಗಾ ಬೆಳೆಯೂ ಹೊಲದಲ್ಲಿ ಕೊಳೆಯುತ್ತಿದೆ. ಇನ್ನು ಕಟಾವು ಮಾಡದೇ ಇರುವ ಶೇಂಗಾ ಗಿಡದಲ್ಲಿ ಕಾಯಿಗಳು ಮೊಳಕೆಯೊಡೆಯುತ್ತಿವೆ.
ಬಂದ ಅಲ್ಪಸ್ವಲ್ಪ ಬೆಳೆಯು ಕೈಗೆ ಸಿಗುವ ಸಮಯದಲ್ಲಿ ರೈತರಿಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಶೇಂಗಾ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ಬೆಳೆಗಾರರ ಬವಣೆ ಹೇಳತೀರದಾಗಿದೆ.
ಬಯಲುಸೀಮೆಯ ಬಡವರ ಬಾದಾಮಿ ರೈತನನ್ನು ಸಾಲದ ಸುಳಿಗೆ ಸಿಲುಕಿಸಿದ್ದು ಮಳೆಯು ಇನ್ನಿಲ್ಲದ ಅವಾಂತರ ಸೃಷ್ಟಿಸಿದೆ.
ಜಿಲ್ಲೆಯ ಕೆಲವೆಡೆ ರೈತರು ಮೆಕ್ಕೆಜೋಳ ಕಟಾವು ಮಾಡಿದ್ದು ಮಳೆಯಿಂದಾಗಿ ಕೊಳೆಯುವ ಭೀತಿ ಎದುರಿಸುತ್ತಿದ್ದಾರೆ. ಕಡಲೆ ಬೆಳೆಗೆ ಶೀತ ಹೆಚ್ಚಾಗಿ, ಕೊಳೆರೋಗದ ಭೀತಿಯಲ್ಲಿದ್ದಾರೆ. ತೊಗರಿ ಬೆಳೆಗಾರರು , ಹೂ ಬೆಳೆಗಾರರು ಈ ಮಳೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ಕಾರವು ಬೆಳೆ ಹಾನಿಗೊಳಗಾದ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ಅಲ್ಲದೇ ಫಸಲ್ ಭೀಮಾ ಯೋಜನೆ ಯಲ್ಲಿ ಅರ್ಹ ಫಲಾನುಭವಿಗಳಿಗೆ ಬೆಳೆವಿಮೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕೃಷಿಗೆ ಸಂಬಂಧಿಸಿದಂತೆ 66,376 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳು ಹಾನಿಯಾಗಿವೆ. 33,800 ಹೆಕ್ಟೇರ್ ಶೇಂಗಾ, 10,413 ಹೆಕ್ಟೇರ್ ರಾಗಿ, 10,699 ಹೆಕ್ಟೇರ್ ಮೆಕ್ಕೆಜೋಳ ಹಾನಿಯಾಗಿದೆ. ಜಿಲ್ಲೆಯಲ್ಲಿ ಇನ್ನೂ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಎಷ್ಟು ನಷ್ಟವಾಗಿದೆ ಎಂಬುವುದರ ಕುರಿತು ಸಮೀಕ್ಷೆ ನಡೆಸಲಾಗುತ್ತದೆ. ತೋಟಗಾರಿಕೆ ಬೆಳೆಗಳಿಗೆ ಯಾವುದೇ ನಷ್ಟವಾಗಿಲ್ಲ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.