ಚಿತ್ರದುರ್ಗ, (ಮೇ.09) : ಶೈಕ್ಷಣಿಕ ಕ್ಷೇತ್ರದಲ್ಲಿ ಯಾವುದೇ ಫಲಿತಾಂಶ ಎಂದಾಕ್ಷಣ ಕರಾವಳಿ, ಘಟ್ಟ ಪ್ರದೇಶ ಜಿಲ್ಲೆಗಳು ಟಾಪ್ ಲೀಸ್ಟ್‍ನಲ್ಲಿರುತ್ತಿದ್ದವು. ಆದರೆ, ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಎಲ್ಲ ದಾಖಲೆ ಮುರಿದು ರಾಜ್ಯದಲ್ಲಿಯೇ ನಂ.1 ಸ್ಥಾನ ಚಿತ್ರದುರ್ಗ ಜಿಲ್ಲೆ ಪಡೆದಿರುವುದು ನಮ್ಮೆಲ್ಲರ ಹೆಮ್ಮೆ ವಿಷಯ ಆಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಬರಗಾಲ, ಬಡತನ, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗ ಜಿಲ್ಲೆ ಶೈಕ್ಷಣಿಕವಾಗಿಯೂ ಹಿಂದುಳಿತ್ತು. ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಲ್ಲೂ ಅತ್ಯಂತ ಹಿಂದುಳಿದಿತ್ತು. ಆದರೆ, ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಐತಿಹಾಸಿಕ ದಾಖಲೆಯನ್ನೇ ಮಾಡಿದೆ. ಈ ವಿಷಯದಲ್ಲಿ ಮಠ-ಮಾನ್ಯಗಳು, ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿದ್ಯಾರ್ಥಿಗಳು, ಪಾಲಕರ ಶ್ರಮ ಬಹಳಷ್ಟು ಇದೆ ಎಂದು ಶ್ಲಾಘೀಸಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿಗಳು ಕೂಡ ಫಲಿತಾಂಶದಲ್ಲಿ ಮೇಲುಗೈ ಆಗಿರುವುದು ಅತ್ಯಂತ ಸಂತಸ ಉಂಟು ಮಾಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಲ್ಲ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ವಿದ್ಯಾಸಿರಿ ಮೂಲಕ ವಿದ್ಯಾರ್ಥಿ ವೇತನ, ಉಚಿತ ಲ್ಯಾಪ್‍ಟ್ಯಾಪ್, ಶೂ, ಕ್ಷೀರಭಾಗ್ಯದ ಮೂಲಕ ಹಾಲು ವಿತರಣೆ ಹೀಗೆ ಅನೇಕ ಯೋಜನೆಗಳು ಬಯಲುಸೀಮೆ ಪ್ರದೇಶದ ವಿದ್ಯಾರ್ಥಿಗಳ ಸದೃಢತೆ, ಜ್ಞಾನಾರ್ಜನೆಗೆ ಸಹಕಾರಿ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ದೇಶ, ಪ್ರದೇಶ ಸಮಗ್ರವಾಗಿ ಅಭಿವೃದ್ಧಿಗೊಳ್ಳಬೇಕಾದರೆ ಅಲ್ಲಿ ಶೈಕ್ಷಣಿಕ ವ್ಯವಸ್ಥೆ ಗುಣಮಟ್ಟದಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಮೇ 15ರಂದು ರಾಜ್ಯದಲ್ಲಿ ಸ್ಥಾಪನೆ ಆಗಲಿರುವ ಹೊಸ ಸರ್ಕಾರ ವಿವಿಧ ಯೋಜನೆ ರೂಪಿಸಲಿದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
ಜೊತೆಗೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದ ನಂ.1 ಪಟ್ಟಕ್ಕೆ ಚಿತ್ರದುರ್ಗ ಜಿಲ್ಲೆ ಏರಲು ಪ್ರಮುಖ ಕಾರಣವಾದ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಇತರೆ ಇಲಾಖೆಗಳ ಮುಖ್ಯಸ್ಥರು ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳೊಂದಿಗೆ ಶೀಘ್ರದಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗುವುದು. ಈ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಚಿತ್ರದುರ್ಗ ಜಿಲ್ಲೆ ತನ್ನ ಗುಣಮಟ್ಟತೆ ಹೆಚ್ಚಿಸಿಕೊಳ್ಳಲು ಸಹಕಾರಿ ಆಗಲಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶ್ರಮಿಸಿದ ಶಿಕ್ಷಕರು, ಸೂಕ್ತ ಯೋಜನೆಗಳ ಮೂಲಕ ಮಾರ್ಗದರ್ಶನ ನೀಡಿದ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳಿಗೆ ಗೌರವ ಸಮರ್ಪಣೆ ಕೂಡ ಹಮ್ಮಿಕೊಳ್ಳುವುದು ಸೂಕ್ತವಾಗಿದೆ. ಈ ಸಂಬಂಧ ಶೀಘ್ರದಲ್ಲಿ ಸಮಾನ ಮನಸ್ಕರ ಸಭೆ ಆಯೋಜಿಸಿ ಚರ್ಚೆ ಬಳಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.