ಬೆಂಗಳೂರು: ಎಸ್ಎಸ್ಎಲ್ಸಿ ಹಾಗೂ ಪಿಯು ವಿದ್ಯಾರ್ಥಿಗಳ ಜೀವನದ ಬಹಳ ಪ್ರಮುಖ ಘಟ್ಟವಾಗಿದೆ. ಹೀಗಾಗಿ ಪೋಷಕರು ಕೂಡ ತುಂಬಾನೇ ಕಷ್ಟಪಟ್ಟು ಮಕ್ಕಳಿಗಾಗಿ ಪರೀಕ್ಷಾ ಸಮಯದಲ್ಲಿ ಕಾಳಜಿಯನ್ನ ವಹಿಸುತ್ತಾರೆ. ಇದೀಗ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯ ದಿನಾಂಕವನ್ನು ಶಿಕ್ಷಣ ಇಲಾಖೆ ಪ್ರಕಟ ಮಾಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ದಿನಾಂಕವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಹಾಗೇ ಫಲಿತಾಂಶದ ಸಂಭಾವ್ಯ ದಿನಾಂಕವನ್ನು ಸೂಚಿಸಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆ ನಡೆಯುವಹದು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೂ ನಡೆಯಲಿದೆ. ಏಪ್ರಿಲ್ 7ರಂದು ಫಲಿತಾಂಶ ಬರುವ ಸಾಧ್ಯತೆ ಇದೆ. ಹಾಗೇ ಎಸ್ಎಸ್ಎಲ್ಸಿ ಪರೀಕ್ಷೆಯು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೂ ನಡೆಯಲಿದೆ. ಇದರ ಫಲಿತಾಂಶ ಏಪ್ರಿಲ್ 24ರಂದು ಬರುವ ಸಾಧ್ಯತೆ ಇದೆ.
ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಹೊಸಬರು 6.46 ಲಕ್ಷ, ಪುನರಾವರ್ತಿತ ವಿದ್ಯಾರ್ಥಿಗಳು 50 ಸಾವಿರ, ಖಾಸಗಿ ವಿದ್ಯಾರ್ಥಿಗಳು 13 ಸಾವಿರ ಇದ್ದಾರೆ. ಇನ್ನು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಒಟ್ಟು 9,02,889 ವಿದ್ಯಾರ್ಥಿಗಳು ಬರೆಯಲಿದ್ದಾರೆ. ಅದರಲ್ಲಿ ಹೊಸಬರು 8.13 ಲಕ್ಷ ವಿದ್ಯಾರ್ಥಿಗಳಾದರೆ, ಪುನರಾವರ್ತಿತ ವಿದ್ಯಾರ್ಥಿಗಳು 62 ಸಾವಿರ ಇದ್ದಾರೆ. ಖಾಸಗಿಯಾಗಿ 27 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ‘ಪರೀಕ್ಷಾ ಪ್ರವೇಶ ಪತ್ರ’ (Hall Ticket) ತೋರಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಮತ್ತು ಮನೆಗೆ ಮರಳಲು ಉಚಿತವಾಗಿ ಪ್ರಯಾಣಿಸಬಹುದು. ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಹಬ್ಬಿಸುವವರ ವಿರುದ್ಧ ಇಲಾಖೆ ಸಮರ ಸಾರಿದೆ. ವಾಟ್ಸಾಪ್, ಟೆಲಿಗ್ರಾಮ್, ಇನ್ಸ್ಟಾಗ್ರಾಮ್‌ಗಳಲ್ಲಿ “ಪ್ರಶ್ನೆ ಪತ್ರಿಕೆ ಸಿಗುತ್ತದೆ” ಎಂದು ಸುಳ್ಳು ಪೋಸ್ಟ್ ಹಾಕುವ ಅಕೌಂಟ್ಗಳ ಮೇಲೆ ವಿಶೇಷ ನಿಗಾ ಇಡಲಾಗಿದೆ.




