ಚಿತ್ರದುರ್ಗ : ಇಂದು ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದ್ದು, ಏಪ್ರಿಲ್ 11 ರವರೆಗೆ ನಡೆಯಲಿದೆ. ಇತ್ತ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ 23,103 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿದ್ದಾರೆ.
ಜಿಲ್ಲೆಯ 98 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ತೆರೆಯಲಾಗಿದೆ. ಪ್ರತಿ ಕೊಠಡಿಗೆ 20 ಜನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಮಾತ್ರ ಅವಕಾಶ ವ್ಯವಸ್ಥೆ ಮಾಡಲಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಚಿತ್ರದುರ್ಗ ತಾಲ್ಲೂಕಿನ 30, ಚಳ್ಳಕೆರೆ ತಾಲ್ಲೂಕಿನ 21, ಹಿರಿಯೂರು ತಾಲ್ಲೂಕಿನ 15, ಹೊಳಲ್ಕೆರೆ ತಾಲ್ಲೂಕಿನ 12, ಹೊಸದುರ್ಗ ತಾಲ್ಲೂಕಿನ 12 ಹಾಗೂ ಮೊಳಕಾಲ್ಮುರು ತಾಲ್ಲೂಕಿನ 08 ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 98 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಇಂದು ಮೊದಲಿಗೆ ಕನ್ನಡ ಪ್ರಶ್ನೆ ಪತ್ರಿಕೆ ಪರೀಕ್ಷೆ ನಡೆಯುತ್ತಿದ್ದು, ಬೆಳಿಗ್ಗೆ 10.30 ರಿಂದ 1.45 ವರೆಗೆ ಎಕ್ಸಾಂ ನಡೆಯಿತ್ತಿದೆ.
ಹಿರಿಯೂರಿನಲ್ಲಿ 3535 ವಿದ್ಯಾರ್ಥಿಗಳು : ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ 3535 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.
ತಾಲ್ಲೂಕಿನ ನಗರ ವ್ಯಾಪ್ತಿಯಲ್ಲಿ 4, (1162 ವಿದ್ಯಾರ್ಥಿಗಳು) ಗ್ರಾಮೀಣ ಪ್ರದೇಶದಲ್ಲಿ 11(2373 ವಿದ್ಯಾರ್ಥಿಗಳು) ಒಟ್ಟು
15 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಸರ್ಕಾರಿ ಶಾಲೆಯ 1696 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 1107 ವಿದ್ಯಾರ್ಥಿಗಳು ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 732 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಕೊಠಡಿ ಒಳಗಡೆ ಪ್ರವೇಶಿಸಿದರು.
ಇನ್ನು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿ, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಉತ್ಸಾಹದಿಂದ ಬಂದ ವಿದ್ಯಾರ್ಥಿಗಳು : ಜೀವನದ ಬಹು ಮುಖ್ಯ ಮೊದಲ ಘಟ್ಟದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಬಲು ಉತ್ಸಾಹದಿಂದ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸಿದರು. ಕೆಲವರು ಪೋಷಕರ ಜೊತೆಗೆ ಬಂದರೆ, ಇನ್ನು ಕೆಲವು ಸ್ನೇಹಿತರ ಜೊತೆಗೆ ಬಂದರು. ಪರೀಕ್ಷೆ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳ ಸ್ನೇಹಿತರು ಒಬ್ಬರಿಗೊಬ್ಬರು ಶುಭಾಶಯಗಳನ್ನು ಕೋರಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆ: ನಿಷೇಧಾಜ್ಞೆ ಜಾರಿ : ಜಿಲ್ಲೆಯಲ್ಲಿ ಇದೇ ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆ ನಿಮಿತ್ತ ಪರೀಕ್ಷೆಗಳನ್ನು ಶಾಂತಿಯುತವಾಗಿ, ಸುವ್ಯವಸ್ಥಿತವಾಗಿ ಹಾಗೂ ಪಾರದರ್ಶಕತೆಯಿಂದ ನೆಡೆಸಲು ಚಿತ್ರದುರ್ಗ ಜಿಲ್ಲೆಯಾದ್ಯಂತ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.
ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ ವ್ಯಾಪ್ತಿಯ 200 ಮೀಟರ್ ಸುತ್ತ ಸಿ.ಆರ್.ಪಿ.ಸಿ ಕಲಂ 144ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷೆ ನಡೆಯುವ ಎಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿನ ಜೆರಾಕ್ಸ್ ಅಂಗಡಿ ಹಾಗೂ ಕಂಪ್ಯೂಟರ್ ಇಂಟರ್‍ನೆಟ್ ಕೇಂದ್ರಗಳನ್ನು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮುಚ್ಚುವಂತೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್‍ಗಳು ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರದಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದರು.