SSLC ಪರೀಕ್ಷೆ | ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವುದು ಹೇಗೆ ? : ಕೆ.ಟಿ.ನಾಗಭೂಷಣ್ ಅವರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ…!

2 Min Read

ಮಾರ್ಚ್ 28 ರಿಂದ SSLC ಪರೀಕ್ಷೆ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಎದುರಿಸಲು ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕರು ಹಲವು ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ.

ಕೆ.ಟಿ.ನಾಗಭೂಷಣ್
ವಿಜ್ಞಾನ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ,
ರೇಖಲಗೆರೆ ಲಂಬಾಣಿ ಹಟ್ಟಿ,
ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ
ಮೊ : 9972247679

ವಿಜ್ಞಾನ ವಿಷಯದಲ್ಲಿ ಸರಳವಾಗಿ ಉತ್ತೀರ್ಣರಾಗುವುದರ ಜೊತೆಗೆ ಉತ್ತಮ ಅಂಕಗಳನ್ನು ಪಡೆಯಲು ಸಾಕಷ್ಟು ಅವಕಾಶಗಳಿವೆ.

ಕೆಲವು ವಿಭಾಗದಲ್ಲಿ ಚಿತ್ರಗಳು, ಲೆಕ್ಕಗಳು, ರಚನಾ ಸೂತ್ರ, ಸಮೀಕರಣ ಸರಿದೂಗಿಸುವಿಕೆ, ಚೆಕ್ಕರ್ಡ್ ಬೋರ್ಡ್ , ಎಲೆಕ್ಟ್ರಾನಿಕ್ ವಿನ್ಯಾಸ, ಚುಕ್ಕಿ ಇಲೆಕ್ಟ್ರಾನ್ ವಿನ್ಯಾಸ, ಕ್ರಿಯಾಶೀಲತೆಯ ಸರಣಿ, ಇವುಗಳನ್ನು ಸರಿಯಾದ ಕ್ರಮದಲ್ಲಿ ಬರೆಯುವುದರಿಂದ ಫಲಿತಾಂಶ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.

ವಿಜ್ಞಾನ ಪ್ರಶ್ನೆ ಪತ್ರಿಕೆಯು ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರ, ಜೀವಶಾಸ್ತ್ರ ಎಂಬ ಮೂರು ಭಾಗಗಳನ್ನು ಹೊಂದಿದ್ದು ವಿಷಯಾಧಾರಿತ ಪ್ರಶ್ನೆಗಳಿರುತ್ತವೆ.

ಕ್ರಮಬದ್ಧವಾದ ಓದು , ಓದಿದ್ದನ್ನು ಬರೆದು ಪುನರ್ ಮನನ  ಮಾಡಿಕೊಂಡು ತಮ್ಮ ಕಲಿಕಾ ಖಾತ್ರಿ ಬಗ್ಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಭಾಗ-A  ಭೌತ ಶಾಸ್ತ್ರ 28  ಅಂಕಕ್ಕೆ,
ಭಾಗ-B ರಾಸಾಯನಿಕ ಶಾಸ್ತ್ರ 25 ಅಂಕಕ್ಕೆ ಹಾಗೂ ಭಾಗ -C ಜೀವಶಾಸ್ತ್ರ 27 ಅಂಕಗಳು ಸೇರಿದಂತೆ ಒಟ್ಟು  80 ಅಂಕಗಳಿಗೆ ಪ್ರಶ್ನೆಪತ್ರಿಕೆ ರಚನೆಯಾಗಿರುತ್ತದೆ.

ಪ್ರಸ್ತುತ ಶೈಕ್ಷಣಿಕ ವರ್ಷದ ಭೌತಶಾಸ್ತ್ರ ಭಾಗದಲ್ಲಿ ವಿದ್ಯುತ್ ಶಕ್ತಿ, ವಿದ್ಯುತ್ಪ್ರವಾಹ ಕಾಂತೀಯ ಪರಿಣಾಮಗಳು, ಬೆಳಕು ಪ್ರತಿಫಲನ ವಕ್ರೀಭವನ ಹಾಗೂ ಶಕ್ತಿಯ ಆಕರಗಳು ಎಂಬ 4 ಘಟಕಗಳಿಗೆ 28 ಅಂಕಗಳನ್ನು ನಿಗದಿಪಡಿಸಲಾಗಿದೆ.

ರಾಸಾಯನಿಕ ಶಾಸ್ತ್ರದಲ್ಲಿ, ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು, ಆಮ್ಲ ಪ್ರತ್ಯಾಮ್ಲ ಲವಣಗಳು ,ಲೋಹಗಳು ಮತ್ತು ಅಲೋಹಗಳು, ಕಾರ್ಬನ್ ಮತ್ತು ಅದರ ಸಂಯುಕ್ತಗಳು ,ಧಾತುಗಳ ಆವರ್ತನೀಯ ವರ್ಗೀಕರಣ ಎಂಬ ಘಟಕಗಳಿಗೆ 20 ಅಂಕಗಳನ್ನು

ಜೀವಶಾಸ್ತ್ರ ಭಾಗದಲ್ಲಿ ಜೀವ ಕ್ರಿಯೆಗಳು ,ನಿಯಂತ್ರಣ ಮತ್ತು ಸಹಭಾಗಿತ್ವ ,ನಮ್ಮ ಪರಿಸರ ,ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ ಹಾಗೂ ಮತ್ತು ಜೀವವಿಕಾಸ ಎಂಬ ಘಟಕಗಳಿಗೆ 27 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

ಇದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಒಂದು ಅಂಕದ,2 ಅಂಕದ ,3 ಅಂಕದ, 4ಅಂಕದ , 5 ಅಂಕದ ಪ್ರಶ್ನೆಗಳನ್ನು ಘಟಕವಾರು ಅಧ್ಯಯನ ಮಾಡಿ,ಪ್ರಮುಖ ಅಂಶಗಳ ಪಟ್ಟಿ ತಯಾರಿಸಿಕೊಂಡು ಓದುವ ಕೋಣೆಯಲ್ಲಿ ಅಂಟಿಸಿಕೊಂಡು ಆಗಾಗ ಕಣ್ಣಾಡಿಸುವುದರ ಮೂಲಕ ಮನನ ಮಟ್ಟವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.

ಇದರಿಂದ ಅಂಕಗಳನ್ನು ಪಡೆಯುವ ಸಾಧ್ಯತೆ ಅಧಿಕ ಇದೆ. ಪ್ರಶ್ನೆಪತ್ರಿಕೆಯು ವಸ್ತುನಿಷ್ಠ ಪ್ರಶ್ನೆಗಳು ಅಂಕ 8 ಒಂದು ಅಂಕದ 8, ಎರಡು ಅಂಕದ 8, ಮೂರು ಅಂಕದ 9, ನಾಲ್ಕು ಅಂಕದ 4, ಐದು ಅಂಕದ 1 ಪ್ರಶ್ನೆ ಇರುತ್ತವೆ.

ಇದರಲ್ಲಿ  20 ಅಂಕಗಳಿಗೆ ಆಯ್ಕೆ ಪ್ರಶ್ನೆಗಳಿರುತ್ತವೆ. ಇವುಗಳಿಗೆ ಉತ್ತರಿಸುವಾಗ ವಿದ್ಯಾರ್ಥಿಗಳು ಯಾವ ಪ್ರಶ್ನೆಗೆ ಹೆಚ್ಚು ಉತ್ತರ ಗೊತ್ತಿರುತ್ತದೆಯೋ  ಅಂತಹ ಪ್ರಶ್ನೆ ಆಯ್ಕೆ ಮಾಡಿಕೊಂಡು ಉತ್ತರಿಸಿದರೆ ಹೆಚ್ಚು ಅಂಕಗಳನ್ನು ಪಡೆಯಬಹುದು.

16 ಅಂಕಗಳಿಗೆ ಚಿತ್ರಗಳನ್ನು ಬರೆಯಲು ಅವಕಾಶವಿರುತ್ತದೆ ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಮಂಡಳಿ ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆಪತ್ರಿಕೆ ಮತ್ತು ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಪುನರಾವರ್ತಿಸುವುದರಿಂದ ಪಬ್ಲಿಕ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಬಹುದು.

ಇದನ್ನು ಅರಿತು ಕ್ರಮವಾಗಿ ಬರೆದು ಕಡಿಮೆ ಸಮಯದಲ್ಲಿ ಸ್ಮಾರ್ಟ್ ವರ್ಕ್ ರೀತಿಯಲ್ಲಿ ಅಭ್ಯಾಸ ಮಾಡಿದ್ದರೆ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ ಸುಲಭವಾಗಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಿದೆ. ಶುಭವಾಗಲಿ

Share This Article
Leave a Comment

Leave a Reply

Your email address will not be published. Required fields are marked *