ಮಾರ್ಚ್ 31 ರಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ : ಚಿತ್ರದುರ್ಗ ಜಿಲ್ಲೆಯಲ್ಲಿ 98 ಪರೀಕ್ಷಾ ಕೇಂದ್ರ : 23428 ವಿದ್ಯಾರ್ಥಿಗಳು :  ಪರೀಕ್ಷೆ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಸಭೆ

3 Min Read

 

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ(ಮಾರ್ಚ್.21): ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಯಾವುದೇ ಲೋಪದೋಷಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಹಾಗೂ 6ನೇ ತರಗತಿ ಆದರ್ಶ ಶಾಲೆ ಪ್ರವೇಶ ಪರೀಕ್ಷೆ ಸಿದ್ಧತೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪರೀಕ್ಷಾ ಮಾರ್ಗದರ್ಶಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಎಸ್.ಎಸ್.ಎಲ್.ಸಿ ಪರೀಕ್ಷಾ ಪತ್ರಿಕೆಗಳನ್ನು ಸಂಗ್ರಹಿಸಿಡುವ ತಾಲೂಕು ಖಜಾನೆಗಳಲ್ಲಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. 24*7 ದಿನದಲ್ಲಿ 3 ಪಾಳಿಗಳಲ್ಲಿ ಪೊಲೀಸ್ ಸಿಬ್ಬಂದಿ ಕಾವಲು ಕಾಯಬೇಕು. ಬಿ.ಇ.ಓ ನೇತೃತ್ವದ ಸಮಿತಿಯ ಸಮ್ಮುಖದಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕು ಖಜಾನೆಗಳಿಂದ ಪರೀಕ್ಷೆ ಕೇಂದ್ರಗಳಿಗೆ ರವಾನಿಸಬೇಕು.

ಇತರೆ ಕಾರಣಗಳಿಗೆ ಖಜಾನೆಯ ಸ್ಟ್ರಾಂಗ್ ರೂಮ್ ತೆರೆಯುವ ಪ್ರಸಂಗ ಬಂದರೆ, ಬಿ.ಇ.ಓ ನೇತೃತ್ವದ 3 ಜನರ ಸಮಿತಿ ಮಾಹಿತಿ ನೀಡಿ ಅವರ ಹಾಜರಿಯಲ್ಲಿ ಸ್ಟ್ರಾಂಗ್ ರೂಮ್ ತೆರೆಯಬೇಕು. ಪ್ರಶ್ನೆ ಪತ್ರಿಕೆಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಅಗತ್ಯ ಪೋಲಿಸ್ ಸಿಬ್ಬಂದಿ ನೇಮಕ: ಜಿಲ್ಲೆಯಲ್ಲಿ 98 ಎಸ್.ಎಸ್.ಎಲ್‍ಸಿ. ಪರೀಕ್ಷಾ ಕೇಂದ್ರಗಳಿವೆ. ಇವುಗಳಿಗೆ ಅಗತ್ಯ ಇರುವ ಪೊಲೀಸ್ ಸಿಬ್ಬಂದಿ ನೇಮಕ ಮಾಡಬೇಕು. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಹೊರಡಿಸಲಾಗಿರುತ್ತದೆ. ಪರೀಕ್ಷೆ ಬರೆಯವ ವಿದ್ಯಾರ್ಥಿ ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳನ್ನು ಹೊರತು ಪಡೆಸಿ ಅನ್ಯರು ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವಂತಿಲ್ಲ.

ನಕಲು ಹಾಗೂ ಇತರೆ ಅಕ್ರಮಗಳು ನಡೆಯದಂತೆ ಕಡಿವಾಣ ಹಾಕಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌರ್ಯಗಳ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಪೋನ್, ಸ್ಮಾರ್ಟ್ ಫೋನ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಕೊಂಡಯ್ಯಲು ಅವಕಾಶವಿಲ್ಲ.

ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಕೊಠಡಿಯಲ್ಲೂ ಗಡಿಯಾರ ಇರಬೇಕು. ಪರೀಕ್ಷಾ ಕೇಂದ್ರ ಮುಖ್ಯಸ್ಥರು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.

98 ಪರೀಕ್ಷಾ ಕೇಂದ್ರ 23428 ವಿದ್ಯಾರ್ಥಿಗಳು: ಮಾರ್ಚ್ 31 ರಿಂದ ಏಪ್ರಿಲ್ 15 ವರೆಗೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಈ ಬಾರಿ ಜಿಲ್ಲೆಯಲ್ಲಿ 98 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಳೆದ ಬಾರಿ 97 ಪರೀಕ್ಷಾ ಕೇಂದ್ರಗಳು ಇದ್ದವು. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹಿರಿಯೂರು ತಾಲೂಕಿನ ಆರನಕಟ್ಟೆಯಲ್ಲಿ ಹೊಸದಾಗಿ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. 12002 ಬಾಲಕರು, 11426 ಬಾಲಕಿಯರು ಸೇರಿದಂತೆ 23428 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದಾರೆ.

ತಾಲೂಕುವಾರು ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು 37 ಮಾರ್ಗಧಿಕಾರಿಗಳನ್ನು ನೇಮಿಸಿ ತಂಡ ರಚಿಸಲಾಗಿದೆ. ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿಡಲು ಚಿತ್ರದುರ್ಗ ನಗರದ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ ಸ್ಟ್ರಾಂಗ್ ರೂಮ್ ಸ್ಥಾಪಿಸಿಲಾಗಿದೆ. ಮಂಡಳಿಯು ಸೂಚಿಸವ ಜಿಲ್ಲೆಗೆ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಕಳುಹಿಸಿಕೊಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಚಿತ್ರದುರ್ಗ ನಗರದಲ್ಲಿ 6 ಕಡೆ ವಿಷಯವಾರು ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಸಭೆಯಲ್ಲಿ ಮಾಹಿತಿ ನೀಡಿದರು.

ಮಾರ್ಚ್ 26 ರಂದು ಆದರ್ಶ ಶಾಲೆ ಪ್ರವೇಶ ಪರೀಕ್ಷೆ: ಮಾರ್ಚ್ 26 ಭಾನುವಾರದಂದು ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿರುವ ಆದರ್ಶ ಶಾಲೆಯ 6ನೇ ತರಗತಿ ಪ್ರವೇಶಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಒಟ್ಟು 5 ಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿದ್ದು, ಒಟ್ಟು 1493 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಸಭೆಯಲ್ಲಿ ಜಿ.ಪಂ. ಸಿಇಓ ಎಂ.ಎಸ್.ದಿವಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲಾ ತಾಲ್ಲೂಕುಗಳ ಬಿ.ಇ.ಓ, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *