ಸುದ್ದಿಒನ್ : ಶ್ರೀಕೃಷ್ಣ ಜನ್ಮಾಷ್ಟಮಿಯು ಹಿಂದೂಗಳು ಆಚರಿಸುವ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಕೃಷ್ಣಾಷ್ಟಮಿ, ಜನ್ಮಾಷ್ಟಮಿ, ಗೋಕುಲಾಷ್ಟಮಿ, ಶ್ರೀಕೃಷ್ಣ ಜಯಂತಿ ಎಂದು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಭಗವಾನ್ ಕೃಷ್ಣನಿಗೆ ಸಮರ್ಪಿತವಾದ ಈ ದಿನದಂದು ಎಲ್ಲಾ ಭಕ್ತರು ಕೃಷ್ಣನನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾರೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿಯ ಕೃಷ್ಣಾಷ್ಟಮಿ ಬಹಳ ವಿಶೇಷವಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಕೆಲವೆಡೆ ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಸ್ಮಾರ್ತ ಸಮೂಹ ಆಚರಿಸಿದರೆ, ವೈಷ್ಣವ ಪಂಥದವರು ಎರಡನೇ ದಿನ ಕೃಷ್ಣನ ಜನ್ಮದಿನ ಆಚರಿಸುತ್ತಾರೆ.
ಈ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6 ಮತ್ತು 7 ರಂದು ಆಚರಿಸಲಾಗುತ್ತದೆ. ಸ್ಮಾರ್ತ ಸಮೂಹವು ಸೆಪ್ಟೆಂಬರ್ 6 ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಿದರೆ, ವೈಷ್ಣವ ಗುಂಪು ಸೆಪ್ಟೆಂಬರ್ 7 ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತದೆ. ಕೃಷ್ಣ ಜನ್ಮಾಷ್ಟಮಿಯು ಕೃಷ್ಣ ಪಕ್ಷದ ಭಾದ್ರಪದ ಮಾಸದಲ್ಲಿ ಸೆಪ್ಟೆಂಬರ್ ಆರನೇ ತಾರೀಖಿನಂದು ಮಧ್ಯಾಹ್ನ 3:37 ಕ್ಕೆ ಪ್ರಾರಂಭವಾಗುತ್ತದೆ. ಇದು ಸೆಪ್ಟೆಂಬರ್ 7 ರಂದು ಸಂಜೆ 4:14 ಕ್ಕೆ ಕೊನೆಗೊಳ್ಳುತ್ತದೆ.
ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 6 2023 ರಂದು ಬೆಳಿಗ್ಗೆ 9:20 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 7 ರಂದು ಬೆಳಿಗ್ಗೆ 10:25 ಕ್ಕೆ ಕೊನೆಗೊಳ್ಳುತ್ತದೆ. ಆದರೆ ಈ ವರ್ಷದ ಕೃಷ್ಣಾಷ್ಟಮಿ ತುಂಬಾ ವಿಶೇಷವಾಗಿದೆ. ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯು ಕೆಲವು ವರ್ಷಗಳಿಗೊಮ್ಮೆ ನಡೆಯುವ ವಿಶೇಷ ಖಗೋಳ ಸಂಯೋಗದಿಂದ ಬಹಳ ವಿಶೇಷವಾಗಿದೆ ಎಂದು ಹೇಳಲಾಗುತ್ತದೆ.
ಶ್ರೀಕೃಷ್ಣನ ಜನನವಾದಾಗ ರೋಹಿಣಿ ನಕ್ಷತ್ರವಿತ್ತು. ಈ ಬಾರಿಯ ಶ್ರೀಕೃಷ್ಣಾಷ್ಟಮಿಯು ಅತ್ಯಂತ ಮಂಗಳಕರ ಮತ್ತು ಅಪರೂಪವೆಂದು ಪರಿಗಣಿಸಲಾಗಿದೆ. ಭಗವಂತನ ಜನ್ಮದಿನವಾದ ಶ್ರೀಕೃಷ್ಣಾಷ್ಟಮಿಯಂದು ಕೃಷ್ಣನನ್ನು ಪೂಜಿಸುವವರಿಗೆ ಆತನು ಕೃಪೆ ಸಿಗುತ್ತದೆ. ತನ್ನ ಲೀಲೆಗಳಿಂದ ಜಗತ್ತಿಗೆ ಭಕ್ತಿ, ಬುದ್ಧಿವಂತಿಕೆ, ಯೋಗ ಮತ್ತು ಮೋಕ್ಷವನ್ನು ಕರುಣಿಸುತ್ತಾನೆ ಎಂಬ ನಂಬಿಕೆಯಿದೆ.
ಸಂತಾನಹೀನತೆಯಿಂದ ಬಳಲುತ್ತಿರುವವರು ಈ ದಿನದಂದು ಕೃಷ್ಣನನ್ನು ಪೂಜಿಸಿದರೆ ಸಾಕ್ಷಾತ್ ಶ್ರೀಕೃಷ್ಣನೇ ತಮ್ಮ ಜೀವನದಲ್ಲಿ ಪ್ರವೇಶಿಸುತ್ತಾನೆ ಎಂದು ಬಲವಾಗಿ ನಂಬುತ್ತಾರೆ. ಎಲ್ಲಾ ತಾಯಂದಿರು ಯಶೋದೆಯಂತೆ ಭಾವಿಸಿ ಅವರ ಮನೆಯಲ್ಲಿರುವ ಹೆಣ್ಣು ಮಕ್ಕಳು ಗೋಪಿಕೆಯರಂತೆ ಮತ್ತು ಗಂಡು ಮಕ್ಕಳು ಕೃಷ್ಣನ ವೇಷಭೂಷಣ ಹಾಕಿ ಸಂಭ್ರಮಿಸುತ್ತಾರೆ. ಕೃಷ್ಣಾಷ್ಟಮಿಯ ದಿನದಂದು ಕೃಷ್ಣ ದೇವಾಲಯಗಳಲ್ಲಿ ಪೂಜೆ, ಗೀತಾ ಪಠಣ, ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.