ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 13 : 2024 ನೇ ಸಾಲಿನ ವಿಶ್ವ ವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಮಹೋತ್ಸವದ ವೇದಿಕೆಗಳೊಂದಾದ ಗಾನ ಭಾರತಿ ಸಭಾಂಗಣದ ವೇದಿಕೆಯಲ್ಲಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದ ಅಪ್ಪಟ ಗ್ರಾಮೀಣ ದೇಸಿ ಪ್ರತಿಭೆ ಎಂ. ನುಂಕೇಶ್ ಸಾರಥ್ಯದ ಶ್ರೀ ವಿಜಯ ಮಹಾಂತೇಶ್ವರ ಕಲಾ ಬಳಗ ವಿವಿಧ ಗೀತೆಗಳೊಂದಿಗೆ ಯಶಸ್ವಿ ಗಾಯನ ನೆರವೇರಿಸಿ ಸೈ ಎನಿಸಿಕೊಂಡಿತು.

ಈ ಕಲಾ ತಂಡಕ್ಕೆ ಸದಾ ಬೆನ್ನೆಲುಬಾಗಿ ಭೋವಿ ಗುರುಪೀಠದ ಪರಮ ಪೂಜ್ಯ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿಯವರು ಹರಸಿ ಹಾರೈಸಿ ಪೋಷಿಸುತ್ತಿದ್ದಾರೆ. ಈಗಾಗಲೇ ಈ ತಂಡವು ರಾಜ್ಯ ಮತ್ತು ಹೊರ ರಾಜ್ಯದ ಮುಖ್ಯ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿ ಯಶಸ್ವಿಯಾಗಿರುತ್ತಾರೆ. ಕಲಾ ತಂಡವನ್ನು ಯಶಸ್ವಿಯಾಗಿ ಮುನ್ನಡಿಸಿಕೊಂಡು ಹೋಗುತ್ತಿರುವ ಎಂ. ನುಂಕೇಶ್ ರವರ ಕಲಾ ಸೇವೆ ಶ್ಲಾಘ ನೀಯವಾದುದ್ದು ಎಂದು ಕೆ.ಪಿ.ಸಿ.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಪ್ಪ ನೇರಲಗುಂಟೆ ರವರು ಅಭಿನಂದಿಸಿದರು.


