ಸುದ್ದಿಒನ್, ಹಿರಿಯೂರು, ಫೆಬ್ರವರಿ. 13 : ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಹಿರಿಯೂರು ನಗರದ ಐತಿಹಾಸಿಕ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಗುರುವಾರ ಮಧ್ಯಾಹ್ನ 1.20ರ ಸಮಯಕ್ಕೆ ಅದ್ದೂರಿಯಾಗಿ ಸಂಪನ್ನಗೊಂಡಿತು. ಈ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ, ಸ್ವಾಮಿಯ ಪ್ರೀತಿಗೆ ಪಾತ್ರರಾದರು.
ಇಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದಲ್ಲಿದ್ದ ಶಿವಧನಸ್ಸನ್ನು ಹೊರತೆಗೆದು, ಸಮೀಪದ ವೇದಾವತಿ ನದಿಗೆ ತೆಗೆದುಕೊಂಡು ಹೋಗಲಾಯಿತು. ಬಳಿಕ ಆ ಧನಸ್ಸಿಗೆ ಅಭಿಷೇಕ ಮಾಡಿ ದೇವಾಲಯಕ್ಕೆ ತರಲಾಯಿತು. ಆನಂತರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬ್ರಹ್ಮರಥದಲ್ಲಿ ದೇವರನ್ನು ಕೂರಿಸಿದ ಮೇಲೆ ಮುಜರಾಯಿ ಅಧಿಕಾರಿ ಹಾಗೂ ತಹಸೀಲ್ದಾರ್ ಸಿ. ರಾಜೇಶ್ ಕುಮಾರ್ ಪೂಜೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ದೇವರಿಗೆ ಪೂಜೆ ಸಲ್ಲಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಸಂಜೆ ವೇಳೆ ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ಸ್ವಾಮಿ ರಥೋತ್ಸವ ನಡೆಯಿತು. ಮುನ್ನೇಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬ್ಯಾರೀಕೇಡ್ ಅಳವಡಿಸಿ ಭಕ್ತಾದಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಈ ರಥೋತ್ಸವದಲ್ಲಿ ಬಾವುಟದ ಹರಾಜು ಪ್ರಕ್ರಿಯೆ ಕೂಡ ಬಹಳ ಮುಖ್ಯವಾದದ್ದು. ಈ ಬಾರಿಯೂ ಭಕ್ತರ ಸಮ್ಮುಖದಲ್ಲಿ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ನಡೆಯಿತು. ಒಂದು ಲಕ್ಷಕ್ಕೆ ಜಗದೀಶ್ ಭಂಡಾರಿ ಅವರಿಂದ ಆರಂಭವಾದ ಹರಾಜು ಪ್ರಕ್ರಿಯೆಯು ಹಂತಹತವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೇ ನೇರ ಪೈಪೋಟಿ ಏರ್ಪಟ್ಟಿತ್ತು, ಅಂತಿಮವಾಗಿ ರೂ 26.50 ಲಕ್ಷಗಳಿಗೆ ಹರಾಜು ಕೂಗುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪಾಲಾಯಿತು.
ಕಳೆದ ಬಾರಿಯೂ ರೂ.18 ಲಕ್ಷಗಳಿಗೆ ಇವರೇ ಕೂಗಿದ್ದರು. ಈ ಬಾವುಟ ಪಡೆದರೆ ಉತ್ತಮ ಆರೋಗ್ಯ, ಸಂಪತ್ತು, ವ್ಯಾಪಾರ ವಹಿವಾಟು ವೃದ್ಧಯಾಗುತ್ತದೆ ಎಂಬ ನಂಬಿಕೆಯು ಇದೆ. ಆದ್ದರಿಂದ ಅನೇಕ ಜನರು ಬಾವುಟ ಪಡೆಯಲು ಪೈಪೋಟಿ ನಡೆಸುತ್ತಾರೆ. ಕಳೆದ ಬಾರಿಗಿಂತ ಹೆಚ್ಚಿನ ಮೊತ್ತಕ್ಕೆ ಕೂಗುವ ಮೂಲಕ ಜನತೆಯಲ್ಲಿ ಉತ್ಸಾಹ ಹೆಚ್ಚಿಸಿತ್ತು.