ಶ್ರೀ ಮೇದಾರ ಕೇತೇಶ್ವರರ ಕಾಯಕಪ್ರಜ್ಞೆಯನ್ನು ಮೈಗೂಡಿಕೊಳ್ಳಿ : ಡಾ. ಬಸವ ಕುಮಾರ ಸ್ವಾಮೀಜಿ

suddionenews
1 Min Read

ಸುದ್ದಿಒನ್, ಚಿತ್ರದುರ್ಗ, ಜ. 13 : ಹುಟ್ಟಿದಾಗ ಬೇಕಾದ ತೊಟ್ಟಿಲು, ಮರಣಿಸಿದಾಗ ಬೇಕಾದ ಚಟ್ಟ ತಯಾರಿಕೆಗೆ ಬಿದಿರನ್ನೇ ಬಳಸುತ್ತೇವೆ. ಈ ಸಮಗ್ರ ಕಲ್ಪನೆಯನ್ನು 12ನೇ ಶತಮಾನದಲ್ಲೇ ಅರಿತು ಬಿದಿರನ್ನೇ ಕಾಯಕ ವಸ್ತುವನ್ನಾಗಿ ಮಾಡಿಕೊಂಡು ಬಂದ ಹಣದಿಂದ ಹಸಿದ ಜಂಗಮರಿಗೆ ದಾಸೋಹ ನೆರವೇರಿಸುತ್ತಿದ್ದ ಅಪರೂಪದ ಕಾಯಕಯೋಗಿ ಶ್ರೀ ಮೇದಾರ ಕೇತೇಶ್ವರ ಶರಣರು. ಇವರು ಬಸವಣ್ಣನವರ ಅತ್ಯಾಪ್ತ ಶರಣರಲ್ಲಿ ಒಬ್ಬರಾಗಿದ್ದು, ಇವರ ಕಾಯಕಪ್ರಜ್ಞೆಯನ್ನು ನಾವು ಮೈಗೂಡಿಕೊಳ್ಳಬೇಕಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವ ಕುಮಾರ ಮಹಾಸ್ವಾಮಿಗಳು ಕರೆ ನೀಡಿದರು.

ಶ್ರೀಗಳವರು ಚಿತ್ರದುರ್ಗದ ಶ್ರೀ ಮುರುಘಾ ಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ತಾಣದಲ್ಲಿಂದು ನಡೆದ ಶಿವಶರಣ ಮೇದರ ಕೇತಯ್ಯನವರ ಜಯಂತಿಯ ಸಾನಿಧ್ಯ ವಹಿಸಿ ಮಾತನಾಡಿ ಶರಣರ ದಾಸೋಹ ಪ್ರಜ್ಞೆ ನಮಗೆಲ್ಲ ಸ್ಪೂರ್ತಿಯಾಗಲಿ ಎಂದು ನುಡಿದರು.

ಸಮ್ಮುಖ ವಹಿಸಿದ್ದ ಚಿತ್ರದುರ್ಗ ಮೇದರ ಗುರುಪೀಠದ ಶ್ರೀ ಇಮ್ಮಡಿ ಬಸವ ಮೇದರ ಕೇತೇಶ್ವರ ಸ್ವಾಮಿಗಳು ಮಾತನಾಡುತ್ತ, ಕಾಯಕ ನಿಷ್ಠೆಯ ಕೇತಯ್ಯನವರು ಒಲಿದ ಬಂಗಾರವನ್ನು ಧೂಳಿಗೆ ಸಮ ಎಂದು ತಿಳಿದಿದ್ದರು ಹಾಗೂ ಪ್ರಾಣಕ್ಕಿಂತಲೂ ಕಾಯಕ, ದಾಸೋಹ ಮುಖ್ಯ ಎಂದು ತಿಳಿದವರು ಎಂಬುದನ್ನು ಶರಣರ ಜೀವನ ನಿದರ್ಶನಗಳ ಮೂಲಕ ವಿವರಿಸಿದರು.
ಸಿರಸಂಗಿಯ ಮಹಂತ ಸ್ವಾಮಿಗಳು ಮಾತನಾಡುತ್ತ ಚಿನ್ನವು ಬಂಧನಕ್ಕೆ ಆಹ್ವಾನ ನೀಡುತ್ತದೆ ಹಾಗಾಗಿ ಅದು ಬೇಡ ಎಂದು ಕಾಯಕದಲ್ಲಿಯೇ ತೃಪ್ತಿ ಕಂಡವರು ಶ್ರೀ ಮೇದರ ಕೇತೇಶ್ವರ ಶರಣರು. ಬಿದಿರಿನ ಮಹತ್ವದ ಮೂಲಕ ಕಾಯಕ ಪ್ರಜ್ಞೆಯನ್ನು ರೂಢಿಸಿಕೊಂಡವರು ಇವರಾಗಿದ್ದರು ಎಂದು ಹೇಳಿದರು.

 

ಸಮಾರಂಭದಲ್ಲಿ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳು, ಶರಣೆ ಲಲಿತಮ್ಮ, ಹರಗುರು ಚರಮೂರ್ತಿಗಳು ಹಾಗೂ ಶ್ರೀಮಠದ ಭಕ್ತರು, ನೌಕರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾರ್ಥನೆ ಹಾಗೂ ಸ್ವಾಗತವನ್ನು ಸಹಶಿಕ್ಷಕರಾದ ತಿಪ್ಪೇರುದ್ರಪ್ಪ. ಸಿ.ಎಂ. ಮಾಡಿದರು. ಶರಣು ಸಮರ್ಪಣೆಯನ್ನು ಶಿಕ್ಷಕರಾದ ಜಯಪ್ಪ. ಕೆ ಮಾಡಿದರು. ಶಿಕ್ಷಕರಾದ ವಸಂತಕುಮಾರ್.ಬಿ ಇವರು ಕಾರ್ಯಕ್ರಮ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *