ಚಿತ್ರದುರ್ಗ | ಅದ್ದೂರಿಯಾಗಿ ನಡೆದ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

2 Min Read

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 26 : ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿ ಮಠದಲ್ಲಿ ಇದೇ ಫೆಬ್ರವರಿ 17 ರಿಂದ 23 ರ ವರೆಗೂ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ, ಬ್ರಹ್ಮ ರಥೋತ್ಸವ, ನೂತನ ಗೋಪುರ ಕಳಶ ಪ್ರತಿಷ್ಠಾನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಗಳಿಂದ ನೆರವೇರಿತು.

ಫೆಬ್ರವರಿ 22 ರಂದು ಬೆಳಿಗ್ಗೆ 10:00 ಗಂಟೆಗೆ ನೂತನ ಗೋಪುರದ ಕಳಸ [ತೇರಿನ ಕಳಸ] ಪ್ರತಿಷ್ಟಾಪನೆಯು
ಶ್ರೀ ಮಠದ ಸದ್ಗುರುಗಳಾದ ಶ್ರೀ ತಿಪ್ಪೇಸ್ವಾಮಿ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಪುರವರ್ಗ ಹಿರೇಮಠ, ಶ್ರೀ ಕ್ಷೇತ್ರ ಆವರಗೊಳ್ಳ, ದಾವಣಗೆರೆ ಜಿಲ್ಲೆ ಶ್ರೀ ಷ।। ಬ್ರ।। ಓಂಕಾರ ಶಿವಾಚಾರ್ಯ ಮಹಾಸ್ವಮಿಗಳ ದಿವ್ಯ ಸಾನಿಧ್ಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ
ವೈಭವಯುತವಾಗಿ ಉದ್ಘಾಟಿಸಲಾಯಿತು.

ಹಿಂದಿನ ದಿನದ ರಾತ್ರಿಯಲ್ಲಿ ಶ್ರೀ ಸುರೇಶಾರಾರು ಮತ್ತು ತಂಡದಿಂದ ಹೋಮ ಹವನಾದಿಗಲು, ಪಜಾ ಕೈಂಕರ್ಯಗಳು ನಡೆದವು. ಉದ್ಘಾಟನೆಯ ನಂತರ ಉಭಯ ಶ್ರೀಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ಆಶೀರ್ವಚನ ನೀಡಿದರು ಹಾಗೂ ಶ್ರೀ ಉಜ್ಜಿನಿ ಮಹಾ ತಪಸ್ವಿ ಶ್ರೀಶ್ರೀಶ್ರೀ ಜಗದ್ಗುರು ಸಿದ್ದಲಿಂಗ ಶಿವಚಾರ್ಯರ ದಿವ್ಯ ಪವಾಡಗಳು, ಅವರಿಗೆ ಇದ್ದ ಮನುಕುಲದ ಏಳಿಗೆಯ ಕಾಳಜಿ, ಅವರ ವೃತ್ತಾಂತವನ್ನು ಸವಿಸ್ತಾರವಾಗಿ ಹೇಳಿದರು.

 

ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಇದರ ನಂತರ ಸಂಜೆ ವೇಳೆಗೆ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯವರ ಹೂವಿನ ಪಲ್ಲಕ್ಕಿ ಉತ್ಸವವು ಗ್ರಾಮದಲ್ಲಿ ಶ್ರೀ ಮಹೇಶ, ವಡ್ಡರ ಸಿದ್ದವ್ವನಹಳ್ಳಿ ಇವರ ತಂಡದೊಂದಿಗೆ ವೀರಗಾಸೆ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ನಂತರ ಶ್ರೀಮಠದಲ್ಲಿ ಗದ್ದುಗೆಗೆ ರುತ್ರಾಭಿಷೇಕ ಪೂಜಾಕಾರ್ಯಕ್ರಮವು ವಿಧಿವತ್ತಾಗಿ ನಡೆಯಿತು. ನಂತರ ಶ್ರೀಮಠದ ವತಿಯಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಫೆಬ್ರವರಿ 23 ರಂದು ಸಂಜೆ 4 ರಿಂದ ಶ್ರೀಮಠದಲ್ಲಿ ಬ್ರಹ್ಮರಥೋತ್ಸವದ ಪೂಜಾಕಾರ್ಯಕ್ರಮಗಳು ವಿಧಿವತ್ತಾಗಿ ಪೂಜ್ಯ ಶ್ರೀ ತಿಪ್ಪೇಸ್ವಾಮಿ ಶ್ರೀಗಳ ನೇತೃತ್ವದಲ್ಲಿ ನಡೆಯಿತು. ಬ್ರಹ್ಮ ರಥೋತ್ಸವ ಕಾರ್ಯಕ್ರಮಕ್ಕೆ ನೆರೆಯ ಆಂಧ್ರಪ್ರದೇಶ ರಾಜ್ಯದಿಂದ, ನೆರೆಯ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆ, ಶಿವಮೊಗ್ಗ, ಬೆಂಗಳೂರು, ವಿಜಯನಗರ ಜಿಲ್ಲೆಗಳಿಂದ ಸಾವಿರಾರು ಜನರ ಉಪಸ್ಥಿತಿಯಲ್ಲಿ ಜರುಗಿತು.
ಬ್ರಹ್ಮರಥೋತ್ಸವದ ಕಾರ್ಯಕ್ರಮದಲ್ಲಿ ಮುಕ್ತಿಬಾವುಟದ ಹರಾಜಿನಲ್ಲಿ ಚಳ್ಳಕೆರೆ ಶಿವಮ್ಮ ದಂಪತಿಗಳು ರೂಪಾಯಿ 1.50 ಲಕ್ಷಕ್ಕೆ ಬಾವುಟವನ್ನು ಪಡೆದುಕೊಂಡರು. ನಂತರ ರಥವನ್ನು ಸಾವಿರಾರು ಜನರು ಎಳೆದು ನಂತರ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು.

 

ಜಾತ್ರೆಯು ಸಂಪೂರ್ಣ ಯಶಸ್ವಿಯಾಗಿ, ಪೊಲೀಸರ ಭದ್ರತೆಯಲ್ಲಿ ಅದ್ಧೂರಿಯಾಗಿ ನಡೆಯಿತು. ನೆರೆದಿದ್ದ ಭಕ್ತರಿಗೆ ಇಡೀ ದಿನ ನಿರಂತರ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು. ಜಾತ್ರೆಯ ಸಂದರ್ಭದಲ್ಲಿ ಊರಿನ ಮುಖ್ಯಸ್ಥರು, ಗೌಡರು, ಅಧ್ಯಕ್ಷರಾದ ಬಿ. ಚಿಕ್ಕಣ್ಣ, ಖಜಾಂಚಿ ಹರೀಶ್‌ಯಾದವ್‌ ಎಸ್‌.ಜಿ., ಕಾರ್ಯಾಧ್ಯಕ್ಷರು ಪ್ರಶಾಂತ, ಮತ್ತು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಸೇವಾ ಟ್ರಸ್ಟಿನ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

Share This Article
Enable Notifications OK No thanks