ಕೊಲಂಬೋ: ಕಳೆದ ಕೆಲವು ದಿನಗಳಿಂದ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದರಿಂದ ಜನ ಸಹನೆ ಕಳೆದುಕೊಳ್ಳುತ್ತಿದ್ದಾರೆ. ಹಲವು ಬಾರಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಆದರೆ ಈ ಇಂದು ಕೋಪಗೊಂಡ ಸ್ಥಳೀಯರು, ತೀವ್ರತೆರನಾದ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಶ್ರೀಲಂಕಾದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ಪ್ರತಿಭಟನೆ ತೀವ್ರತೆ ಪಡೆದು ಮಾಜಿ ಸಚುವ ಹಾಗೂ ಸಂಸದರ ಮನೆಗೆ ಬೆಂಕಿ ಹಚ್ಚಿದ್ದಾರೆ. ಮಾಜಿ ಸಚಿವ ಜಾನ್ಸನ್ ಫರ್ನಾಂಡೋ ಮತ್ತು ಸಂಸದ ಸನತ್ ನಿಶಾಂತ ನಿವಾಸದ ಮೇಲೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಸಾವಿರಾರು ಜನ ಬೀದಿಗಿಳಿದು, ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ತೀವ್ರತೆ ಕಂಡು ಪ್ರಧಾನಿ ಮಹೀಂದಾ ರಾಜಪಕ್ಸಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಇನ್ನು ಘಟನೆಯಿಂದ ಕೆಲವರಿಗೆ ತೀವ್ರ ಗಾಯವಾಗಿದ್ದರು, ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಕೊಲಂಬೋದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 138 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಮಂದಿ ಕಂಗೆಟ್ಟಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಲೆ ಬಂದಿದ್ದಾರೆ. ಇಂದು ಪ್ರತಿಭಟನೆಯ ಕಾವು ತೀವ್ರತೆ ಪಡೆದಿತ್ತು.