ಚಿತ್ರದುರ್ಗ, (ಫೆ.17) : ತಾಲ್ಲೂಕಿನ ಬೆಳಗಟ್ಟ ಗ್ರಾಮದ ಶ್ರೀ ಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದಲ್ಲಿ ಇದೇ ಫೆಬ್ರವರಿ 18 ರಿಂದ 28 ರವರೆಗೆ ಮಹಾ ಶಿವರಾತ್ರಿ ಮಹೋತ್ಸವ ನಡೆಯಲಿದ್ದು, ಫೆ.21ರಂದು 22ನೇ ಮಹಾರಥೋತ್ಸವ ಜರುಗಲಿದೆ.
ಫೆ.18ರಂದು ಸಂಜೆ 6.21ಕ್ಕೆ ಗೋಧೂಳಿ ಮುಹೂರ್ತದಲ್ಲಿ ಗೋಪೂಜೆ ಹಾಗೂ ಶ್ರೀಮಠದಲ್ಲಿ ಶರಣ ಭಕ್ತವೃಂದದವರಿಂದ ಜಾಗರಣೆ ಮತ್ತು ಭಜನೆ ಕಾರ್ಯಕ್ರಮ ನಡೆಯಲಿದೆ. ಫೆ.19ರಂದು ಬೆಳಿಗಿನ ಜಾವ 1.21ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ರುದ್ರಾಭಿಷೇಕ ಮತ್ತು ರುದ್ರಹೋಮ, ಲೋಕ ಕಲ್ಯಾಣಾರ್ಥವಾಗಿ ಬೆಳಗಟ್ಟದ ಶ್ರೀಶಕ್ತಿ ಪೀಠದಲ್ಲಿ ನೆಲೆಸಿರುವ ದಂಪತಿ ಸಮೇತ ನವಗ್ರಹ ದೇವತೆಗಳಿಗೆ ಅಭಿಷೇಕ, ಪೂಜೆ ಹಾಗೂ ಮಡಿಲಿಕ್ಕೆ ಸಮರ್ಪಣೆ, ಶ್ರೀ ದುರ್ಗಾಪರಮೇಶ್ವರ ಅಮ್ಮನವರಿಗೆ ಶರಣರಿಂದ ಅಭಿಷೇಕ, ಕಂಕಣಧಾರಣೆ, ಬಳೆ ಮತ್ತು ಸುವರ್ಣ ಸಮರ್ಪಣೆ, ಅಲಂಕಾರ ನಂತರ ಹಸು ಮಕ್ಕಳಿಂದ ಉಡಿ ತುಂಬುವುದು. ಬೆಳಗಿನ ಜಾವ 6.18ಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ಮಕ್ಕಳಿಂದ ಧ್ವಜಾರೋಹಣ ನಡೆಯಲಿದೆ.
ಅಮ್ಮ ಮಹದೇವಮ್ಮ ಅವರು ದಿವ್ಯ ಉಪಸ್ಥಿತಿವಹಿಸುವರು. ಬೆಂಗಳೂರಿ ಲೋಕೇಶ್ವರ ಗುಪ್ತ, ಬೆಳಗಟ್ಟದ ಎಂ.ನಾಗೇಶ್ ನೇತೃತ್ವ ವಹಿಸುವರು.
ಫೆ.20ರಂದು ಮಧ್ಯಾಹ್ನ 3.41ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಫೆ.21ರಂದು ಬೆಳಿಗ್ಗೆ 11.05ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಶ್ರೀ ಗುರುಕರಿಬಸವೇಶ್ವರ ಸ್ವಾಮಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ 22ನೇ ಮಹಾರಥೋತ್ಸವ ನಡೆಯಲಿದೆ. ಬೆಳಗಟ್ಟ ಶ್ರೀ ಕರಿಬಸವೇಶ್ವರಜ್ಜಯ್ಯ ಸ್ವಾಮಿ ಮಠದ ಪೀಠಾಧ್ಯಕ್ಷೆ ಅಮ್ಮಮಹದೇವಮ್ಮ ಅಧ್ಯಕ್ಷತೆ ವಹಿಸುವರು. ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಸ್ವಾಮಿ ದಿವ್ಯ ಸಾನಿಧ್ಯ ವಹಿಸುವರು.
ಸಾರಿಗೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಉದ್ಘಾಟನೆ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹೊಳಲ್ಕೆರೆ ಶಾಸಕರು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಶ್ರೀರಾಮುಲು ಆಪ್ತ ಸಹಾಯಕ ಹಾಗೂ ಬಿಜೆಪಿ ಎಸ್ ಟಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ, ಭೀಮಸಮುದ್ರದ ವಾಣಿಜ್ಯೋದ್ಯಮಿ ಬಿ.ಟಿ.ಸಿದ್ದೇಶ್, ಆರ್ಯವೈಶ್ಯ ಸಂಘ ಅಧ್ಯಕ್ಷ ಎಲ್.ಇ.ಶ್ರೀನಿವಾಸ್, ಭೀಮಸಮುದ್ರ ಅಡಿಕೆ ವ್ಯಾಪಾರಿ ಬಿ.ತಿಮ್ಮಪ್ಪ, ಶಿವಮೊಗ್ಗ ವಾಣಿಜ್ಯೋದ್ಯಮಿ ಬಟಪಾಟಿ ಅಶ್ವಥರೆಡ್ಡಿ, ಮಾತೃಶ್ರೀ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್ ಭಾಗವಹಿಸುವರು. ಕೊಟ್ಟೂರು ಅಮರನಾಥ ಯಾತ್ರಾ ಸೇವಾ ಸಮಿತಿಯ ಸತೀಶ್ ಕೋರಗಲ್ ಅವರಿಗೆ ಸನ್ಮಾನ ಮಾಡಲಾಗುವುದು.
ಬೆಳಗಟ್ಟದ ಮಾರುತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ.
ಸ್ವರ್ಣಗೌರಿ, ತನ್ಮಯಿಗೌಡ ಅವರಿಂದ ನೃತ್ಯವೈವಿದ್ಯ ಕಾರ್ಯಕ್ರಮ ಇದೆ.
ಮಧ್ಯಾಹ್ನ 1ಕ್ಕೆ ದಾಸೋಹ ನಡೆಯಲಿದೆ. ಫೆ.28ರಂದು ಮಧ್ಯಾಹ್ನ 3.31ಕ್ಕೆ ಕರ್ಕಾಟಕ ಲಗ್ನದಲ್ಲಿ ರಾಶಿಪೂಜೆ ನಡೆಯಲಿದೆ.
ಮಾರ್ಚ್ 1ರಂದು ಬೆಳಗಿನ ಜಾವ 3ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಮಂತ್ರಾಲಯ ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.