ನೊಂದಿರುವ ತಮ್ಮ ಬಂಧುಗಳ ಮನೆಯಲ್ಲಿ
ತಮಂಧವೇ ತುಂಬಿರುವಾಗ
ಒಂದು ಹಣತೆಯನ್ನು ಹಚ್ಚಿಡಲಾಗದ
ನಾವು, ದೇವರ ಹೆಸರಿನಲ್ಲಿ
ಲಕ್ಷದೀಪೋತ್ಸವ ನಡೆಸುತ್ತೇವೆ.
ಮೃಷ್ಟಾನ್ನ ಬೋಜನದ
ಜಿಡ್ಡಿನಲ್ಲೆ ಜಡ್ಡುಗಟ್ಟಿರುವ ನಮಗೆ
ಅಳುವ ಹಸುಗೂಸುಗಳ
ಹಸಿವಿನ ಸಂಕಟ
ಅರಿಯಲಾರದ ನಾವು
ದೇವರ ಹೆಸರಲ್ಲಿ
ಹಾಲಿನಭಿಷೇಕ ಮಾಡುತ್ತೇವೆ.
ಹತ್ತು ಜನ್ಮ ಹೊತ್ತು ತಿರುಗಿದರು
ಸವೆಯದ ಪಾಪದ ಹೊರೆಯನ್ನ
ಹರಿವ ಹೊಳೆಯಲ್ಲಿ
ತೊಳೆಯಲು ತವಕಿಸುತ್ತಾ
ನೊಂದವರಿಗೆ ನೆರವಾಗುವುದನ್ನೆ
ಮರೆತ ನಾವು
ದೇವರ ಹೆಸರಲ್ಲಿ
ಕಿರೀಟ ಕಂಠೀಹಾರ ಮಾಡಿಸುತ್ತೇವೆ.
ಕಾಣದ ದೇವರಿಗಾಗಿ
ಮಂದಿರ, ಮಸೀದಿ, ಇಗರ್ಚಿಗಳನು
ಕೆಡವಿ ಕಟ್ಟುವ ಉನ್ಮಾದದಲ್ಲಿ
ನಮ್ಮ ಎದೆಗಳೇ ಕಲ್ಲಾಗುತ್ತಿವೆ
ನೆತ್ತರಿಗೆ ನೆತ್ತರೇ ಉತ್ತರವೆಂಬ
ಉನ್ಮತ್ತಿನಲ್ಲಿ ಕೊಲ್ಲುವ ನಾವು,
ದೇವರ ಹೆಸರಲ್ಲಿ
ಪ್ರೀತಿಸುವುದನ್ನೇ ಮರೆತಿದ್ದೇವೆ.