ವರದಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ. ನ.24: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರನ್ನು ನೋಂದಾಯಿಸುವ ಸಲುವಾಗಿ ಜಿಲ್ಲೆಯ ಪಿಯುಸಿ, ಪದವಿ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಸೇರಿದಂತೆ ಎಲ್ಲ ಕಾಲೇಜುಗಳಲ್ಲಿ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ-2024ರ ಪ್ರಯುಕ್ತ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನಸಭಾ ಕ್ಷೇತ್ರವಾರು ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಚುರ ಪಡಿಸಲಾಗಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು 18 ವರ್ಷ ಮಾತ್ರವಲ್ಲದೆ, 2006 ಡಿಸೆಂಬರ್ 31 ರ ಒಳಗೆ ಜನಿಸಿರುವ ಎಲ್ಲರನ್ನೂ ಅಂದರೆ, 17 ವರ್ಷ ಪೂರ್ಣಗೊಂಡವರನ್ನೂ ಕೂಡ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ನಮೂನೆ-06 ಪಡೆದುಕೊಳ್ಳಬೇಕು. ಡಿಸೆಂಬರ್ 9 ರವರೆಗೆ ನೊಂದಣಿಗೆ ಅವಕಾಶವಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಯಾವುದೇ ಅರ್ಹ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗುಳಿಯದೆ, ವ್ಯವಸ್ಥಿತ ರೀತಿಯಲ್ಲಿ ಮತಪಟ್ಟಿಯಲ್ಲಿ ನೊಂದಾಯಿಸುವ ಕೆಲಸ ಆಗಬೇಕು ಎಂದು ಸೂಚನೆ ನೀಡಿದರು.
ಸ್ವೀಪ್ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ವಿಶೇಷ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ತಾಲ್ಲೂಕು ಪಂಚಾಯಿತಿ ಇಒಗಳು ಎಲ್ಲ ಕಾಲೇಜುಗಳಿಗೆ ಭೇಟಿ ನೀಡಿ, ಯುವ ಮತದಾರರ ನೊಂದಣಿಗೆ ವಿಶೇಷ ಅಭಿಯಾನ, ಜಾಗೃತಿ ಮೂಡಿಸಬೇಕು. ಯುವ ಮತದಾರರ ನೋಂದಣಿಯಲ್ಲಿ ಆಯಾ ತಾಲ್ಲೂಕು ಪಂಚಾಯಿತಿ ಇಒಗಳು ಬಹು ಮುಖ್ಯ ಪಾತ್ರವಹಿಸಲಿದ್ದು, ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ. ಯಾವುದೇ ಲೋಪ-ದೋಷಗಳಿಲ್ಲದಂತೆ ಯುವ ಮತದಾರರ ನೋಂದಣಿ ಮಾಡಿಸಿ ಎಂದು ಹೇಳಿದರು.
ನರ್ಸಿಂಗ್ ವಿದ್ಯಾರ್ಥಿಗಳು, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ನೋಂದಣಿಗೆ ಜಿಲ್ಲಾ ಶಸ್ತ್ರಚಿಕಿತ್ಸಕರು ಸಂಬಂಧಪಟ್ಟ ಪ್ರಾಂಶುಪಾಲರಿಗೆ ಸೂಕ್ತ ನಿರ್ದೇಶನ ನೀಡಿ, ನೋಂದಣಿಗೆ ಕ್ರಮವಹಿಸಬೇಕು. ಅದೇ ರೀತಿಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಾಗೂ ಪದವಿ ಕಾಲೇಜು, ಐಟಿಐ, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಹಾಗೂ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಆಧಾರ್ ಕಾರ್ಡ್, 2 ಭಾವಚಿತ್ರ, ಜನ್ಮ ದಾಖಲೆಗಾಗಿ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ವಿಳಾಸದ ಪುರಾವೆಗಾಗಿ ತಂದೆ ಅಥವಾ ತಾಯಿಯ ಎಪಿಕ್ ಕಾರ್ಡ್ ಜೆರಾಕ್ಸ್ ಇದಿಷ್ಟು ದಾಖಲೆಗಳೊಂದಿಗೆ ನಮೂನೆ-06 ಭರ್ತಿ ಮಾಡಿ ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಕ್ರಮವಹಿಸಬೇಕು.
ಡಿಸೆಂಬರ್ 02 ರ ಒಳಗಾಗಿ ಎಲ್ಲ ಕಾಲೇಜಿನವರು ವಿದ್ಯಾರ್ಥಿಗಳಿಂದ ಭರ್ತಿ ಮಾಡಿದ ನಮೂನೆ-06 ಅನ್ನು ಪಡೆದು, ಕ್ರೋಢೀಕರಿಸಿ ಆಯಾ ತಾ.ಪಂ. ಇಒ ಗಳಿಗೆ ತಪ್ಪದೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಅಗತ್ಯ ಸಹಕಾರ ನೀಡಬೇಕು. ನಾವೆಲ್ಲರೂ ತಂಡದ ರೀತಿಯಲ್ಲಿ ನೋಂದಣಿ ಕಾರ್ಯದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸೋಣ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಎಂ.ಕಾರ್ತೀಕ್ ಮಾತನಾಡಿ, ಅರ್ಹ ಇರುವ ಯುವ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಮತದಾನದಿಂದ ವಂಚಿತರಾಗಬಾರದು. ಜಿಲ್ಲೆಯಲ್ಲಿರುವ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಶೇ.100ರಷ್ಟು ನೊಂದಣಿ ಆಗುವಂತೆ ಕ್ರಮವಹಿಸಬೇಕು. ಮತದಾರರ ನೋಂದಣಿಯನ್ನು ಕೆಲಸ ಎಂದು ಭಾವಿಸದೇ ಪ್ರಜಾಪ್ರಭುತ್ವ ಬಲಗೊಳಿಸುವ ಪವಿತ್ರ ಕಾರ್ಯ ಎಂದು ಪರಿಗಣಿಸಿ, ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುಬ್ರಾನಾಯಕ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಓ.ಪರಮೇಶ್ವರಪ್ಪ ಸೇರಿದಂತೆ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಇದ್ದರು.