ಕಲಾಪ ಮುಂದೂಡಿದ ಸ್ಪೀಕರ್ ಯು.ಟಿ. ಖಾದರ್ : ಕಾರಣವೇನು?

1 Min Read

ವಿಧಾನಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿ ಕಲಾಪವನ್ನು ಸಮಯ ಹೇಳದೆ ಮುಂದೂಡಿದ ಘಟನೆ ನಡೆದಿದೆ.

ಸದನದಲ್ಲಿ ಲಿಖಿತ ರೂಪದಲ್ಲಿ ಕೇಳಲಾದ ಸುಮಾರು 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡನೆ ವೇಳೆ ಈ ಪ್ರಸಂಗ ನಡೆಯಿತು. ಸಚಿವರು ಪ್ರಶ್ನೆಗಳಿಗೆ ನಿರೀಕ್ಷಿತ ಉತ್ತರ ನೀಡದೆ ಇರುವುದರಿಂದ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸ್ಪೀಕರ್ ಖಾದರ್, ಸದನದಲ್ಲಿ ಶಾಸಕರು ಕೇಳುವ ಪ್ರಶ್ನೆಗಳಿಗೆ ಸಚಿವರು ಸಮರ್ಪಕವಾಗಿ ಉತ್ತರ ನೀಡಬೇಕು. ಗಮನ ಸೆಳೆಯುವ ಸೂಚನೆಗಳಿಗೂ ಸಚಿವರಿಂದ ಸ್ಪಷ್ಟ ಪ್ರತಿಕ್ರಿಯೆ ಸಿಗುತ್ತಿಲ್ಲ. ಮೂರು ಬಾರಿ ಸೂಚನೆ ನೀಡಿದರೂ ಸುಧಾರಣೆ ಕಾಣಿಸದಿರುವುದು ಬೇಸರಕಾರಿಯಾಗಿದೆ ಎಂದು ಹೇಳಿದರು.

ಸಂಬಂಧಿಸಿದ ಸಚಿವರು ಬಂದು ಸ್ಪಷ್ಟನೆ ನೀಡುವವರೆಗೂ ಕಲಾಪ ನಡೆಸುವುದಿಲ್ಲ ಎಂದು ಹೇಳಿ ಪೀಠವನ್ನು ತೊರೆದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸ್ಪೀಕರ್ ಸಭಾತ್ಯಾಗ ಮಾಡಿರುವುದು ಸರ್ಕಾರದ ಕಾರ್ಯವೈಖರಿಯ ಮೇಲಿನ ಅಸಮಾಧಾನವನ್ನು ತೋರಿಸುತ್ತದೆ ಎಂದು ಹೇಳಿದರು. ಪ್ರತಿದಿನವೂ ಲಿಖಿತ ಪ್ರಶ್ನೆಗಳ ಪೈಕಿ ಕೇವಲ ಶೇಕಡಾ 10 ರಿಂದ 30 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಅದೇ ವೇಳೆ ಶಾಸಕ ಸುನಿಲ್ ಕುಮಾರ್ ಮಾತನಾಡಿ, ವಿಧಾನಸಭೆ ಇತಿಹಾಸದಲ್ಲೇ ಸರ್ಕಾರದ ಧೋರಣೆಯನ್ನು ಖಂಡಿಸಿ ಸ್ಪೀಕರ್ ಪೀಠ ತೊರೆದಿರುವುದು ಗಂಭೀರ ವಿಚಾರವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸದಸ್ಯರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

Share This Article