ಬೆಂಗಳೂರು: ಶತಮಾನಗಳು ಉರುಳುತ್ತಿವೆ. ಜಾತಿಯನ್ನು ಅಳಿಸಿ, ಮನುಷ್ಯತ್ವವನ್ನು ಎತ್ತಿ ಹಿಡಿಯಬೇಕೆಂಬ ಕನಸು ಕನಸಾಗಿಯೇ ಉಳಿಯುತ್ತಿದೆ. ಜಾತಿ ಜಾತಿ ಎಂಬ ಘೋಷ ವಾಕ್ಯ ಜೋರಾಗಿದೆ. ಇದೀಗ ಬೆಂಗಳೂರಿನಂತ ಮಹಾನಗರದಲ್ಲೂ ಜಾತಿ ವಾದ ಜೋರಾಗಿದೆ.
ದಲಿತ ಮಹಿಳೆಯೊಬ್ಬರು ದೇವಸ್ಥನ ಪ್ರವೇಶಿಸಿದರೆಂದು ದೇಗುಲದ ಧರ್ಮದರ್ಶಿಯೇ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಅಮೃತಹಳ್ಳಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದಿದೆ. ಮಹಿಳೆ ಕಪ್ಪಗಿದ್ದ ಕಾರಣ ಹೀಗೆ ಥಳಿಸಿದ್ದಾರೆ ಎನ್ನಲಾಗಿದೆ.
ಮಹಿಳೆ ದೇವಾಲಯದೊಳಗೆ ಭಕ್ತಿಯಿಂದ ದೇವರಿಗೆ ಕೈ ಮುಗಿದು ನಿಂತಿದ್ದರು. ಈ ವೇಳೆ ಆ ಮಹಿಳೆ ಬಳಿ ಬಂದ ಅರ್ಚಕರು, ದೇವಸ್ಥಾನಕ್ಕೆ ಯಾಕೆ ಬಂದೆ ಎಂದು ಮಹಿಳೆಯ ಜುಟ್ಟನ್ನು ಹಿಡಿದು ಧರಧರನೆ ಎಳೆದುಕೊಂಡು ಹೋಗಿದ್ದಾನೆ. ಮಹಿಳೆ ಏನೋ ಹೇಳಲು ಬಂದರೂ ಕೇಳುವ ತಾಳ್ಮೆ ಅವನಲ್ಲಿ ಕಾಣಲೆ ಇಲ್ಲ.
ಬಳಿಕ ಮುನಿಕೃಷ್ಣ ದೇಗುಲದ ಆವರಣಕ್ಕೆ ಎಳೆದೊಯ್ದು ಮನಬಂದಂತೆ ಥಳಿಸಿದ್ದಾನೆ. ಕಪಾಳಕ್ಕೆ ಹೊಡೆದಿದ್ದಾನೆ, ರಾಡ್ ನಲ್ಲಿ ಪೆಟ್ಟು ಕೊಟ್ಟಿದ್ದಾನೆ. ಇಷ್ಟೆ ಅಲ್ಲದೆ ಈ ವಿಚಾರವನ್ನು ಯಾರಿಗೂ ಹೇಳಬಾರದೆಂದು ಧಮ್ಕಿ ಕೂಡ ಹಾಕಿದ್ದಾನೆ. ಡಿಸೆಂಬರ್ 21 ರಂದು ನಡೆದ ಘಟನೆ ಇದಾಗಿದೆ. ಮಹಿಳೆಯ ಪತಿ ಧೈರ್ಯ ತುಂಬಿದ ಮೇಲೆ ಅಮೃತಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.