ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜು.30) : ಸಣ್ಣ ಸಣ್ಣ ಸಮುದಾಯಗಳು ಒಗ್ಗಟ್ಟಾಗಿ ಏಕಾಗ್ರತೆಯಿಂದ ಹೋರಾಡಿದಾಗ ಮಾತ್ರ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯ ಎಂದು ಮುರುಘಾಮಠದ ಬಸವಪ್ರಭು ಸ್ವಾಮೀಜಿ ಕರೆ ನೀಡಿದರು.
ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಹಿಂದುಳಿದ ವರ್ಗಗಳ ಪ್ರವರ್ಗ-1 ಜನಾಂಗಳ ಒಕ್ಕೂಟದಿಂದ ಇಲ್ಲಿನ ಕ್ರೀಡಾ ಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಜಿಲ್ಲಾ ಮಟ್ಟದ ಶಿಕ್ಷಣ, ಸಾಹಿತ್ಯ, ಸಾಂಸ್ಕøತಿಕ ಕಲೋತ್ಸವ ಉದ್ಗಾಟಿಸಿ ಮಾತನಾಡಿದರು.
ದೊಡ್ಡ ದೊಡ್ಡ ಸಮುದಾಯದವರು ಒಂದಾಗಿ ಹೋರಾಡಿದ್ದರಿಂದ ಮುಂಚೂಣಿಗೆ ಬಂದಿದ್ದಾರೆ. ಸಣ್ಣ ಸಮಾಜ ಒಂದಾಗದಿದ್ದರೆ ಕಷ್ಟವಾಗುತ್ತದೆ. ಒಂದೊಂದು ಸಮುದಾಯದವರಲ್ಲಿ ಒಂದೊಂದು ಪ್ರತಿಭೆ ಕಲೆಯಿದೆ. ಅಲೆಮಾರಿ ಮತ್ತು ಅರೆಅಲೆಮಾರಿಗಳು ಸಂಘಟಿತರಾಗದಿದ್ದರೆ ಸಮುದಾಯ ಉಳಿಯುವುದಿಲ್ಲ. ಹಲವು ಜಾತಿ ಧರ್ಮ, ಜನಾಂಗ ಸೇರಿ ಭಾರತವಾಗಿದೆ. ಆಧುನಿಕ ಜಾಗತೀಕರಣ ಯುಗದಲ್ಲಿ ಸವಾಲು ನಿಮ್ಮ ಮುಂದಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಹೋರಾಟ ನಡೆಸಿದಾಗ ಮಾತ್ರ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆದುಕೊಳ್ಳಬಹುದೆಂದು ಹೇಳಿದರು.
ಅಲೆಮಾರಿ, ಅರೆಅಲೆಮಾರಿ ಜನಾಂಗದವರು ತಮ್ಮ ಕುಲಕಸುಬನ್ನೆ ನೆಚ್ಚಿಕೊಂಡು ಊರು ಊರು ತಿರುಗುವ ಬದಲು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವುದರ ಕಡೆ ಹೆಚ್ಚಿನ ಗಮನ ಕೊಡಿ ಆಗ ನಿಮಗೆ ಸಿಗಬೇಕಾದ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಎಲ್ಲವೂ ದೊರಕುತ್ತದೆ. ಮೊದಲಿನಿಂದಲೂ ನಮ್ಮ ಮಠ ನಿಮ್ಮ ಬೆಂಬಲಕ್ಕಿದೆ. ಈಗಲೂ ಸದಾ ನಿಮ್ಮ ಜೊತೆ ಇರುತ್ತೇವೆಂದು ಬಸವಪ್ರಭು ಸ್ವಾಮೀಜಿ ಭರವಸೆ ನೀಡಿದರು.
ಅಲೆಮಾರಿ ಮತ್ತು ಅರೆಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರಶೆಟ್ಟಿ ಉಳಿದೊಟ್ಟು ಮಾತನಾಡಿ ಒಂದು ವರ್ಷ ಏಳು ತಿಂಗಳು ನಾನು ನಿಗಮದ ಅಧ್ಯಕ್ಷನಾಗಿದ್ದಾಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸುತ್ತಾಡಿ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರು ಅನುಭವಿಸುತ್ತಿರುವ ನೋವು, ಸಂಕಟ, ಸಮಸ್ಯೆಗಳನ್ನು ಕಂಡಿದ್ದೇನೆ, ಹಾಗಾಗಿ ಧ್ವನಿ ಇಲ್ಲದವರ ಜೊತೆ ನಿಲ್ಲಲು ತೀರ್ಮಾನಿಸಿದ್ದೇನೆ. ರಾಜ್ಯದಲ್ಲಿ ಶೇ.5 ರಷ್ಟು ಅಲೆಮಾರಿ ಮತ್ತು ಅರೆಅಲೆಮಾರಿಗಳು ಮಾತ್ರ ಸ್ವಲ್ಪ ಸ್ಥಿತಿವಂತರಾಗಿದ್ದಾರೆ. ಉಳಿದ ಶೇ.95 ರಷ್ಟು ಜನಾಂಗ ಪ್ರಾಣಿಗಳಿಗಿಂತಲೂ ಕಡೆಯಾಗಿ ಟೆಂಟ್, ಡೇರೆ ಹಾಕಿಕೊಂಡು ಬಯಲಲ್ಲಿ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಜೀವಿಸುತ್ತಿದ್ದಾರೆಂದು ಮರುಗಿದರು.
ಹಿಂದುಳಿದ ವರ್ಗಗಳ ಪ್ರವರ್ಗ-1 ಜನಾಂಗಗಳ ಒಕ್ಕೂಟದಲ್ಲಿ ನಲವತ್ತಾರು ಜಾತಿಗಳು ಬರುತ್ತವೆ. ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋದರೆ ಮಾತ್ರ ಸರ್ಕಾರ ತಿರುಗಿ ನೋಡುತ್ತದೆ. ಜಿಲ್ಲೆಯಲ್ಲಿ ಅಲೆಮಾರಿಗಳನ್ನು ಸಂಘಟಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನನ್ನ ಆಸೆ. ಅದಕ್ಕಾಗಿ ಅಲೆಮಾರಿ ಮತ್ತು ಅರೆಅಲೆಮಾರಿಗಳ ಜೀವನ ಎನ್ನುವ 92 ಪುಟಗಳ ಪುಸ್ತಕವನ್ನು ಹೊರತಂದಿದ್ದೇನೆ. ಎಲ್ಲಾ ವರ್ಗಕ್ಕೆ ಸಾಮಾಜಿಕ ನ್ಯಾಯ ಸಿಗಬೇಕೆಂಬ ಉದ್ದೇಶ ನನ್ನದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಮಾತನಾಡಿ ಅಲೆಮಾರಿ ಮತ್ತು ಅರೆಅಲೆಮಾರಿಗಳಿಗೆ ಮೂಲಭೂತ ಸೌಲಭ್ಯಕ್ಕಾಗಿ ಕಳೆದ 30-40 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಇನ್ನು ನಿರೀಕ್ಷೆಗೆ ತಕ್ಕಂತೆ ಸೌಲಭ್ಯಗಳು ಸಿಕ್ಕಿಲ್ಲ. ಐ.ಎ.ಎಸ್.ಅಧಿಕಾರಿ ಶಾಲಿನಿ ರಜನೀಶ್‍ರವರ ಬಳಿ ಹೋಗಿ ಮನವಿ ಮಾಡಿಕೊಂಡಾಗ ಒಂದು ಹಾಸ್ಟೆಲ್ ಚಿತ್ರದುರ್ಗಕ್ಕೆ ಮಂಜೂರಾಯಿತು. ನಂತರ ಕೋರ್ಟ್‍ಗೆ ಹೋಗಿದ್ದರ ಫಲವಾಗಿ ಎರಡು ಹಾಸ್ಟೆಲ್‍ಗಳಾಗಿವೆ. ಒಟ್ಟಾರೆ ಚಿತ್ರದುರ್ಗದಲ್ಲಿ ಮೂರು ಹಾಸ್ಟೆಲ್‍ಗಳಿವೆ. ಹೋರಾಟದಿಂದ ಮಾತ್ರ ಇನ್ನು ಹೆಚ್ಚಿನ ಸೌಲತ್ತುಗಳನ್ನು ಪಡೆಯಬಹುದು. ಅದಕ್ಕಾಗಿ ಅಲೆಮಾರಿ ಮತ್ತು ಅರೆಅಲೆಮಾರಿಗಳು ಸಂಘಟಿತರಾಗಬೇಕೆಂದು ವಿನಂತಿಸಿದರು.
ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ 1928 ರಲ್ಲಿ ಸೈಮನ್ ಕಮೀಷನ್ ಭಾರತಕ್ಕೆ ಆಗಮಿಸಿ ದಲಿತರು, ಶೋಷಿತರು, ಅಲ್ಪಸಂಖ್ಯಾತರು, ದುರ್ಬಲ ವರ್ಗದವರ ಸ್ಥಿತಿಯನ್ನು ಅಧ್ಯಯನ ಮಾಡಲು ಮುಂದಾದಾಗ ಗಾಂಧಿ ಕಾಂಗ್ರೆಸ್‍ನವರು ತಿರಸ್ಕರಿಸಿದರು. ಆಗ ಎಲ್ಲರೂ ಗಾಂಧಿ ಪರವಾಗಿ ನಿಂತರು. 1938 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ದಲಿತರು, ಅಸ್ಪøಶ್ಯರು, ಶೋಷಿತರು, ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಬೇಕೆಂಬ ವಾದ ಮಂಡಿಸಿದರು. ಅಲ್ಲಿಂದ ಇಲ್ಲಿಯತನಕ ಹಿಂದುಳಿದ ವರ್ಗಗಳ ಜನಾಂಗ ಅದರಲ್ಲಿಯೂ ಅಲೆಮಾರಿ ಮತ್ತು ಅರೆಅಲೆಮಾರಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬರುತ್ತಲೆ ಇದ್ದಾರೆ. ಇನ್ನಾದರೂ ಜಾಗೃತರಾಗಿ ಒಗ್ಗಟ್ಟಾಗಬೇಕಿದೆ ಎಂದು ಹೇಳಿದರು.
ಬಸವ ರಮಾನಂದ ಮಹಾಸ್ವಾಮೀಜಿ, ಯೋಗಿ ಸಾಗರನಾಥ್ ಮಹಾರಾಜ್ ಸ್ವಾಮೀಜಿ, ಕರುಣಾಕರ ಸ್ವಾಮೀಜಿ ಇವರುಗಳು ಸಾನಿಧ್ಯ ವಹಿಸಿದ್ದರು.
ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ನಾಗಪ್ಪ ವಾಷರ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಓ.ಪ್ರತಾಪ್‍ಜೋಗಿ, ಕರ್ನಾಟಕ ಲೋಕಾಯುಕ್ತ ವಿಶ್ರಾಂತ ನ್ಯಾಯಾಧೀಶ ಸಿ.ಸೆಲ್ವಕುಮಾರ್, ಇಂದಿರಾ ಗುರುಸ್ವಾಮಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರನ್ನು ಗುರುತಿಸಿ ಸನ್ಮಾನಿಸಲಾಯಿತು.