ಮೈಸೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ದೂರು ನಿಡೀದ್ದಂತ ಸ್ನೇಹಮಯಿ ಕೃಷ್ಣ ಅವರು ಇದೀಗ ತಮ್ಮ ಜೀವ ರಕ್ಷಣೆಗಾಗಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಮೈಸೂರಿನ ಮೂಡಾ ಹಗರಣದ ಬಗ್ಗೆ ದೂರು ನೀಡಿದ ಬಳಿಕ ನನ್ನ ಹಾಗೂ ನನ್ನ ಕುಟುಂಬದ ಜೀವಕ್ಕೆ ಬೆದರಿಕೆ ಇದೆ. ರಾಜ್ಯ ಸರ್ಕಾರದಿಂದ ಯಾವುದೇ ರಕ್ಷಣೆ ನೀಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ದೂರು ದಾಖಲಿಸಿದ್ದಕ್ಕಾಗಿ ತಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬೆದರಿಕೆ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಕುರಿತು ಹೋರಾಟ ಮಾಡುತ್ತಿದ್ದೇನೆ. ಹೀಗಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ಭದ್ರತೆ ನೀಡುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೆ. ಗನ್ ಮ್ಯಾನ್ ನೀಡುವಂತೆ ಕೇಳಿದ್ದೆ. ಆದರೆ ಇದುವರೆಗೂ ಯಾವ ಭದ್ರತೆಯನ್ನು ನೀಡಿಲ್ಲ. ಈಗ ನಮ್ಮ ಜೀವ ಅಪಾಯದಲ್ಲಿದೆ.
ಹಾಲಿ ಮುಖ್ಯಮಂತ್ರಿ ಹಾಗೂ ಇತರ ಪ್ರಭಾವಿ ವ್ಯಕ್ತಿಗಳ ವಿರುದ್ಧ ನಾನು ಹೋರಾಟ ನಡೆಸುತ್ತಿರುವುದರಿಂದ ರಾಜ್ಯ ಸರ್ಕಾರ ನನಗೆ ಭದ್ರತೆ ನೀಡಲು ನಿರಾಕರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವದಿಂದ ಸರ್ಕಾರಿ ಅಧಿಕಾರಿಗಳು ನನ್ನ ಪ್ರಯತ್ನಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ರಾಜ್ಯ ಸರ್ಕಾರದ ಭದ್ರತೆಯನ್ನು ಅವಲಂಬಿಸಿರುವುದು ನನಗೆ ಹಾಗೂ ನನ್ನ ಕುಟುಂಬಕ್ಕೆ ಹೆಚ್ಚು ಅಪಾಯಕಾರಿ ಎಂದು ತೋರುತ್ತದೆ. ಆದ್ದರಿಂದ ನನ್ನ ಜೀವನವನ್ನು ರಕ್ಷಿಸಲು ಮತ್ತು ಸಮಾಜದೊಳಗೆ ನನ್ನ ಕುಟುಂಬದ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವೂ ಭದ್ರತೆ ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.