ಎಸ್.ಎಂ.ಕೃಷ್ಣ | ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ

3 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 11 : ಪ್ರಜಾ ಸೋಶಿಯಲಿಸ್ಟ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ವ್ಯಕ್ತಿತ್ವ ದೊಡ್ಡದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಎಸ್.ಎಂ.ಕೃಷ್ಣರವರ ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

 

ವಿದೇಶದಲ್ಲಿ ಬ್ಯಾರಿಸ್ಟರ್ ಆಫ್ ಲಾ ಪದವಿ ಪಡೆದ ಎಸ್.ಎಂ.ಕೃಷ್ಣರವರು ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿನಿಧಿಸಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿ, ಪ್ರಥಮ ಉಪ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರ ನೋವು ದೇಶಕ್ಕೆ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

 

ಪಾಂಚಜನ್ಯ ಯಾತ್ರೆ ಆರಂಭಿಸಿದ ಎಸ್.ಎಂ.ಕೃಷ್ಣರವರು ನೀರಿಗಾಗಿ ಬೆಂಗಳೂರಿನಿಂದ ಮದ್ದೂರಿಗೆ ಪಾದಯಾತ್ರೆ ನಡೆಸಿ ಎಲ್ಲರ ಗಮನ ಸೆಳೆದಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಗುರುತಿಸಿಕೊಂಡಿದೆಯೆಂದರೆ ಅದಕ್ಕೆ ಎಸ್.ಎಂ.ಕೆ.ರವರ ಕೊಡುಗೆ ಬಹಳಷ್ಟಿದೆ ಎಂದು ಸ್ಮರಿಸಿದರು.

 

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡುತ್ತ ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುವಾಗ ಜಾನ್‍ಎಫ್ ಕೆನಡಿಗೆ ಚುನಾವಣಾ ಪ್ರಚಾರ ಮಾಡಿದ್ದ ಎಸ್.ಎಂ.ಕೃಷ್ಣ ರೈತರು ಅನುಭವಿಸುತ್ತಿದ್ದ ಪಹಣಿ ಸಮಸ್ಯೆಯನ್ನು ಡಿಜಿಟಲ್ ಮಾಡಿ ಸರಳೀಕರಣಗೊಳಿಸಿದರು. ಮುಖ್ಯಮಂತ್ರಿಯಾಗಿದ್ದಾಗ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರುಸಿದರು. ಮನಸ್ಸು ಕಾಂಗ್ರೆಸ್‍ನಲ್ಲಿತ್ತು. ದೇಹ ಮಾತ್ರ ಬಿಜೆಪಿ.ಯಲ್ಲಿತ್ತೆಂದು ತಿಳಿಸಿದರು.

 

ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಮಾತನಾಡುತ್ತ ಎಸ್.ಎಂ.ಕೃಷ್ಣರವರ ನಿಧನದಿಂದ ದೇಶಕ್ಕೆ ನಷ್ಟವಾಗಿದೆ. ಮಕ್ಕಳು ಶಾಲೆಯಿಂದ ಹೊರಗುಳಿಯಬಾರದೆಂದು ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದರು. ಮೋಡ ಬಿತ್ತನೆ ಮಾಡಿದ್ದು, ಅವರ ಅಧಿಕಾರವಧಿಯಲ್ಲಿ ಕಾಡುಗಳ್ಳ ವೀರಪ್ಪನ್ ರಾಜ್‍ಕುಮಾರ್‍ನನ್ನು ಅಪಹರಿಸಿದಾಗ ಚಾಣಾಕ್ಷತನದಿಂದ ಜೀವಂತವಾಗಿ ಬಿಡಿಸಿಕೊಂಡು ದೊಡ್ಡ ಸವಾಲನ್ನು ಎದುರಿಸಿದರು. ಬಡವರ ಬಗ್ಗೆ ಕನಿಕರವಿತ್ತು. ಪಾರದರ್ಶಕ ರಾಜಕಾರಣಿ ಎಂದು ಗುಣಗಾನ ಮಾಡಿದರು.

 

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಎಸ್.ಕುಮಾರ್‍ಗೌಡ ಮಾತನಾಡಿ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ, ಐ.ಟಿ. ಬಿ.ಟಿ.ಗೆ ಎಸ್.ಎಂ.ಕೃಷ್ಣ ಮೂಲ ಕಾರಣಕರ್ತರು. ಮುಖ್ಯಮಂತ್ರಿಯಾಗಿದ್ದಾಗ ಮೆಟ್ರೋ ರೈಲು, ಕೆಂಪೆಗೌಡ ವಿಮಾನ ನಿಲ್ದಾಣಕ್ಕೆ ತೀರ್ಮಾನಿಸಿ ಕಾರ್ಯಗತಗೊಳಿಸಿದರು. ರಾಜ್ಯದ ಮೊದಲ ಉಪ ಮುಖ್ಯಮಂತ್ರಿಯಾಗಿದ್ದರು. ಧೀಮಂತ ರಾಜಕಾರಣಿಯಾಗಿದ್ದ ಅವರಲ್ಲಿ ಸರಳತ್ವ, ಸೃಜಶೀಲ ವ್ಯಕ್ತತ್ವವಿತ್ತು ಎಂದು ಸ್ಮರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ ಮಾತನಾಡುತ್ತ ಒಳ ಮೀಸಲಾತಿಗೆ ಏನಾದರೂ ಜೀವ ಬಂದಿದೆ ಎನ್ನುವುದಾದರೆ ಅದಕ್ಕೆ ಎಸ್.ಎಂ.ಕೃಷ್ಣರವರು ಕಾರಣ. ಅನೇಕ ಹುದ್ದೆಗಳನ್ನು ಅಲಂಕರಿಸಿ ಪಕ್ಷಕ್ಕೆ ರಾಜ್ಯಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ವರ್ಣರಂಜಿತ, ಸರಳ ವ್ಯಕ್ತಿತ್ವದ ನಾಯಕರೆನಿಸಿಕೊಂಡಿದ್ದರು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್ ಮಾತನಾಡಿ 1998 ರಲ್ಲಿ ಪಾಂಚಜನ್ಯ ಯಾತ್ರೆ ಆರಂಭಿಸಿದ ಎಸ್.ಎಂ.ಕೃಷ್ಣರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಜನಪರ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ವಿಕಾಸಸೌಧ, ಉದ್ಯೋಗ ಸೌಧ ನಿರ್ಮಾಣವಾಯಿತು. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಜಾರಿಗೆ ತಂದರೆಂದು ನೆನಪಿಸಿಕೊಂಡರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಮುದಸಿರ್ ನವಾಜ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಸೈಯದ್ ವಲಿಖಾದ್ರಿ ಇವರುಗಳು ಎಸ್.ಎಂ.ಕೃಷ್ಣರವರ ಸಾಧನೆಗಳ ಕುರಿತು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಜಿ.ವಿ.ಮಧುಗೌಡ, ಬಿ.ರಾಜಣ್ಣ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ಮೋಹಿದ್ದಿನ್, ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್, ಚಾಂದ್‍ಪೀರ್, ರೇಣುಕಶಿವು, ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷ ಡಿ.ಕುಮಾರ್ ಪಿಳ್ಳೆಕೆರನಹಳ್ಳಿ ಇನ್ನು ಅನೇಕರು ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಪಾಲ್ಗೊಂಡು ಎಸ್.ಎಂ.ಕೃಷ್ಣರವರಿಗೆ ನಮನ ಸಲ್ಲಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *