ಪದವಿ ಜೊತೆ ಕೌಶಲ್ಯಾಧಾರಿತ ತರಬೇತಿ ಅಗತ್ಯ : ಜಾವೇದ್

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಮಾ.09): ಪದವಿ ಜೊತೆ ಕೌಶಲ್ಯಾಧಾರಿತ ತರಬೇತಿ ಕರಗತಮಾಡಿಕೊಂಡರೆ ಜೀವನದ ದಿಕ್ಕು ಬದಲಾಗುತ್ತದೆ ಎಂದು ಕಂಪ್ಯುಟರ್ ತರಬೇತುದಾರ ಜಾವೇದ್ ಶಿಬಿರಾರ್ಥಿಗಳಿಗೆ ತಿಳಿಸಿದರು.

ನೆಹರು ಯುವ ಕೇಂದ್ರ, ಮದಕರಿ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಸಿಲಿಕಾನ್ ಇನ್ಸ್‍ಟಿಟ್ಯುಟ್ ಆಫ್ ಟೆಕ್ನಾಲಜಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಯುವ ಸಪ್ತಾಹ ಉದ್ಗಾಟಿಸಿ ಮಾತನಾಡಿದರು.

ಸಿಲಿಕಾನ್ ಇನ್ಸ್‌ಟಿಟ್ಯುಟ್ ಅನೇಕ ವರ್ಷಗಳಿಂದಲೂ ಕಂಪ್ಯೂಟರ್ ತರಬೇತಿಯನ್ನು ನಿಸ್ವಾರ್ಥವಾಗಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದೆ. ಕೌಶಲ್ಯ ತರಬೇತಿಯನ್ನು ಪಡೆಯುವುದರಿಂದ ನಿಮ್ಮಲ್ಲಿರುವ ಪ್ರತಿಭೆ ಹೊರಹೊಮ್ಮುತ್ತದೆ. ನಿಮ್ಮ ಆಲೋಚನೆಗಳು ಸದಾ ಸಕಾರಾತ್ಮಕವಾಗಿರಬೇಕು.

ಯಾವುದೇ ತರಬೇತಿಯನ್ನು ಪಡೆದು ಮನೆಯಲ್ಲಿ ಕುಳಿತುಕೊಂಡರೆ ಕೆಲಸ ಸಿಗುವುದಿಲ್ಲ. ಯಾವ ಕೆಲಸವನ್ನು ಮೇಲು-ಕೀಳೆಂದು ಭಾವಿಸುವ ಬದಲು ಸಿಕ್ಕಿರುವ ಕೆಲಸವನ್ನು ಏಕಾಗ್ರತೆಯಿಂದ ಗಮನ ಕೊಟ್ಟು ನಿರ್ವಹಿಸಿದಾಗ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.

ಎಲ್ಲರಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆಯಿರುತ್ತದೆ. ಅದನ್ನು ಹೊರತೆಗೆಯುವ ಕೆಲಸವನ್ನು ಸಿಲಿಕಾನ್ ಇನ್ಸ್‍ಟಿಟ್ಯೂಟ್ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದೆ. ಹಣಕ್ಕಿಂತ ಅನುಭವ ದೊಡ್ಡದು. ನಂತರ ನಿಮ್ಮ ಕೆಲಸದಿಂದ ಹಣ ತಾನಾಗಿಯೇ ಹರಿದು ಬರುತ್ತದೆ. ಕಠಿಣ ಪರಿಶ್ರಮವಿಲ್ಲದೆ ಸುಲಭವಾಗಿ ಏನನ್ನು ನಿರೀಕ್ಷಿಸಬಾರದು ಎಂದು ಕಂಪ್ಯೂಟರ್ ಶಿಬಿರಾರ್ಥಿಗಳಿಗೆ ತಿಳಿಸಿದರು.

ಸಿಲಿಕಾನ್ ಕಂಪ್ಯೂಟರ್ಸ್ ಮುಖ್ಯಸ್ಥರಾದ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಕಂಪ್ಯೂಟರ್ ತರಬೇತಿ ಪಡೆದ ಮೇಲೆ ಕೆಲಸ ಕಲಿಯಿರಿ, ಬ್ಯೂಟಿ ಪಾರ್ಲರ್, ಟೈಲರಿಂಗ್ ಹೀಗೆ ಅನೇಕ ರೀತಿಯ ಕಸೂತಿ ಕೆಲಸಗಳಿಗೆ ಸಾಕಷ್ಟು ಬೇಡಿಕೆಯಿದೆ. ಶ್ರದ್ದೆ ಬೇಕಷ್ಟೆ. ಜ್ಞಾನಕ್ಕೆ ಯಾರು ಹೆಚ್ಚಿನ ಮನ್ನಣೆ ಕೊಡುತ್ತಾರೋ ಅಂತಹವರು ಮಾತ್ರ ಜೀವನದಲ್ಲಿ ಯಶಸ್ವಿಯಾಗಬಹುದು. ಆಸಕ್ತಿಯಿಂದ ಕಂಪ್ಯುಟರ್ ಕಲಿತು ಕೌಶಲ್ಯದಲ್ಲಿ ಹೊಸತನ ಹುಡುಕಿಕೊಳ್ಳಿ ಎಂದು ಸಲಹೆ ನೀಡಿದರು.

ಸಿಲಿಕಾನ್ ಕಂಪ್ಯೂಟರ್ಸ್‍ನ ವ್ಯವಸ್ಥಾಪಕ ಕೆ.ಸೋಮಶೇಖರ್ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *