ಛಾಪ್ರಾ: ಬಿಹಾರದ ಛಾಪ್ರಾದಲ್ಲಿ ಸ್ಫೋಟದಿಂದಾಗಿ ಮನೆ ಕುಸಿದು ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಸ್ಫೋಟದ ಹಿಂದಿನ ಕಾರಣವನ್ನು ನಾವು ತನಿಖೆ ಮಾಡುತ್ತಿದ್ದೇವೆ. ವಿಧಿವಿಜ್ಞಾನ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನು ಸಹ ಕರೆಯಲಾಗಿದೆ ಎಂದು ಸರನ್ ಎಸ್ಪಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಖೈರಾ ಪೊಲೀಸ್ ಠಾಣಾ ವ್ಯಾಪ್ತಿಯ ಖೋಡೈಬಾಗ್ ಗ್ರಾಮದಲ್ಲಿ ರಿಯಾಜ್ ಮಿಯಾನ್ ಎಂಬುವವರ ಮನೆಯಲ್ಲಿ ಸ್ಫೋಟ ಸಂಭವಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಪಟಾಕಿಗಳನ್ನು ಇಡಲಾಗಿತ್ತು. ರಿಯಾಜ್ ಮಿಯಾನ್ ಪಟಾಕಿ ವ್ಯಾಪಾರಿಯಾಗಿದ್ದು, ಮದುವೆ ಸಂದರ್ಭದಲ್ಲಿ ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಅವರ ಮನೆ ಸಂಪೂರ್ಣವಾಗಿ ನಾಶವಾಗಿದ್ದು, ಆರಕ್ಕೂ ಹೆಚ್ಚು ಅಕ್ಕಪಕ್ಕದ ಮನೆಗಳು ಕೂಡ ಬಿರುಕು ಮೂಡಿವೆ. ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಅವಶೇಷಗಳಡಿ ಸಿಲುಕಿದ್ದ ಮೂರು ಶವಗಳನ್ನು ಹೊರತೆಗೆದಿದ್ದಾರೆ. ಇದರಲ್ಲಿ ಮಹಿಳೆ ಮತ್ತು ಮಗು ಕೂಡ ಇದ್ದಾರೆ ಎನ್ನಲಾಗಿದ್ರು, ಯಾರು ಎಂಬುದನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ವರದಿಯಾಗಿದೆ.
ಸ್ಥಳೀಯ ಪೊಲೀಸರ ಪ್ರಕಾರ, ಇನ್ನೂ ಐದು ಜನರು ಅವಶೇಷಗಳೊಳಗೆ ಸಿಲುಕಿಕೊಂಡಿದ್ದಾರೆ, ಇದು ಸಾವಿನ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಗಾಯಾಳುಗಳನ್ನು ಛಾಪ್ರಾದ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.