ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವ: ರೈಲಿನ ವಿಸ್ತರಣೆ ಕುರಿತು ಇಲ್ಲಿದೆ ಪ್ರಕಟಣೆ

1 Min Read

ಶಿರಸಿ: ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ತೆರಳುವ ಭಕ್ತಾದಿಗಳು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ತ್ರಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16581/16582) ರೈಲನ್ನು ಒಂದು ದಿನದ ಮಟ್ಟಿಗೆ ತಾಳಗುಪ್ಪದವರೆಗೆ ತಾತ್ಕಾಲಿಕವಾಗಿ ವಿಸ್ತರಿಸಲಾಗಿದೆ.

ಈ ವಿಸ್ತರಣೆಯು ಮಾರ್ಚ್ 1, 2026ರ ಭಾನುವಾರದಂದು ಕೇವಲ ಒಂದು ಟ್ರಿಪ್‌ಗೆ ಮಾತ್ರ ಸೀಮಿತವಾಗಿರುತ್ತದೆ. ಯಶವಂತಪುರ-ತಾಳಗುಪ್ಪ ರೈಲು (ಸಂಖ್ಯೆ 16581) ಯಶವಂತಪುರದಿಂದ ಮಧ್ಯರಾತ್ರಿ 00:15 ಗಂಟೆಗೆ ಹೊರಟು, ಅದೇ ದಿನ ಬೆಳಗ್ಗೆ 09:00 ಗಂಟೆಗೆ ತಾಳಗುಪ್ಪ ನಿಲ್ದಾಣವನ್ನು ತಲುಪಲಿದೆ. ಹಿಂದಿರುಗುವ ಮಾರ್ಗದಲ್ಲಿ, ತಾಳಗುಪ್ಪ-ಯಶವಂತಪುರ ರೈಲು (ಸಂಖ್ಯೆ 16582) ಶಿವಮೊಗ್ಗ ಟೌನ್ ಬದಲಾಗಿ ತಾಳಗುಪ್ಪದಿಂದಲೇ ರಾತ್ರಿ 22:00 ಗಂಟೆಗೆ (ರಾತ್ರಿ 10:00 ಗಂಟೆಗೆ) ಹೊರಡಲಿದ್ದು, ಮರುದಿನ ಮುಂಜಾನೆ 04:45 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

ವಿಸ್ತರಿತ ಮಾರ್ಗದಲ್ಲಿ ಈ ರೈಲು ಶಿವಮೊಗ್ಗ ಟೌನ್, ಕೋಣಗವಳ್ಳಿ ಹಾಲ್ಟ್, ಹಾರನಹಳ್ಳಿ ಹಾಲ್ಟ್, ಕುಂಸಿ, ಅರಸಾಳು ಹಾಲ್ಟ್, ಕೆಂಚನಾಳು ಹಾಲ್ಟ್, ಆನಂದಪುರಂ, ಅಡ್ಡೆರಿ ಹಾಲ್ಟ್ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ಹಾಲಿ ವೇಳಾಪಟ್ಟಿಯಂತೆ ನಿಲುಗಡೆ ಹೊಂದಿರಲಿದೆ.

ಶಿರಸಿ ಮಾರಿಕಾಂಬಾ ಜಾತ್ರೆಗೆ ತೆರಳುವ ಸಾರ್ವಜನಿಕರು ಹಾಗೂ ಭಕ್ತಾದಿಗಳು ರೈಲ್ವೆ ಇಲಾಖೆ ಕಲ್ಪಿಸಿರುವ ಈ ತಾತ್ಕಾಲಿಕ ವಿಶೇಷ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Share This Article
Enable Notifications OK No thanks