ಚಿತ್ರದುರ್ಗ, (ಅ.25) : ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾದ ಸರ್.ಮಿರ್ಜಾಇಸ್ಮಾಯಿಲ್ ಅವರು ಮೈಸೂರಿನ ದಿವಾನರಾಗಿ ದೂರದೃಷ್ಠಿಯುಳ್ಳ ಜನಹಿತ ಕಾರ್ಯಕ್ರಮಗಳ ರುವಾರಿಯಾಗಿದ್ದರು ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ಎನ್.ಯಶೋಧರ ಹೇಳಿದರು.
ನಗರದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ನಡೆದ ಸರ್.ಮಿರ್ಜಾಇಸ್ಮಾಯಿಲ್ ಅವರ 137ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿ ಮಾತನಾಡಿದರು.
ಸರ್.ಮಿರ್ಜಾಇಸ್ಮಾಯಿಲ್ ಅವರು ಸರ್.ಎಂ.ವಿಶೇಶ್ವರಯ್ಯನವರ ನಂತರ ಮೈಸೂರು ರಾಜ್ಯದ ದಿವಾನರಾಗಿ ಅಧಿಕಾರ ಸ್ವೀಕರಿಸಿದರು. ನಂತರ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರಿಸಿದರು. ಸರ್.ಮಿರ್ಜಾಇಸ್ಮಾಯಿಲ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಪ್ರೇರೇಪಣೆಗೊಂಡು ಅವರ ಸಹಕಾರದಿಂದ ರಾಜ್ಯಾದ್ಯಂತ ಅಭಿವೃದ್ಧಿಯ ಮಹಾಪರ್ವವನ್ನೇ ಸೃಷ್ಠಿಸಿದರು.
ಮಂಡ್ಯದ ಸಕ್ಕರೆ ಕಾರ್ಖಾನೆ, ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕು ಮತ್ತು ಕಾಗದ, ಸಿಮೆಂಟ್ ಕಾರ್ಖಾನೆ, ಬೆಂಗಳೂರಿನಲ್ಲಿ ರಾಸಾಯನಿಕ ಗೊಬ್ಬರ, ಪಿಂಗಾಣಿ ವಸ್ತಗಳ ತಯಾರಿಕೆ, ಕೃತಕ ರೇಷ್ಮೆ, ವಿದ್ಯುತ್ ಬಲ್ಬ, ಎಚ್.ಎ.ಎಲ್ ಕಾರ್ಖಾನೆ ಸ್ಥಾಪನೆ, ಕಾಫಿ ಸಂಸ್ಕರಣಾ ಘಟಕ ಹೀಗೆ ಕನ್ನಡ ನಾಡಿನ ಅಭಿವೃದ್ಧಿಗೆ ನೂರಾರು ಯೋಜನೆಗಳನ್ನು ಜಾರಿಗೆ ತಂದರು. ಜತೆಗೆ ನೆಲ ಜಲ ಭಾಷೆಗೆ ಸಂಬಂಧಿಸಿದಂತೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಸಹಕಾರಿಯಾದರು. ಆ ಮೂಲಕ ಭಾಷಾ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹವನ್ನು ನೀಡಿದರು. ಅವರ ಕನ್ನಡ ಸೇವೆ ಅನನ್ಯವಾದದು ಎಂದು ಶ್ಲಾಘಿಸಿದರು.
ಹಿರಿಯ ಪತ್ರಕರ್ತ ಮತ್ತು ಸಾಹಿತಿ ಜಿ.ಎಸ್.ಉಜ್ಜಿನಪ್ಪ ಮಾತನಾಡಿ ಬ್ರಿಟೀಷರು ಭಾರತವನ್ನು ವಶಪಡಿಸಿಕೊಳ್ಳುವ ಮೊದಲೇ ಕನ್ನಡನಾಡು ಮತ್ತು ಭಾರತ ದೇಶ ಸಾವಿರ ವರ್ಷಕ್ಕೂ ಹೆಚ್ಚುಕಾಲ ಪರಕೀಯರ ಆಳ್ವಿಕೆಗೆ ಒಳ್ಳಪಟ್ಟು ಇಲ್ಲಿನ ಭಾಷೆ, ಸಂಸ್ಕøತಿ, ಸಂಪತ್ತಿನ ದೋಚುವಿಕೆಗೆ ಒಳಗಾಗಿತ್ತು. ಆದರೂ ಸಂಪತ್ತಿನ ರಕ್ಷಣೆ, ದೇಶ, ಭಾಷೆ ಒಗ್ಗೂಡುವಿಕೆಗೆ ಪರಿಶ್ರಮಪಟ್ಟಿದ್ದು ಮಾತ್ರ ಎಲ್ಲ ಭಾಷೆಯ ಕವಿಗಳಿಂದ. ಕವಿಗಳು ಬರೆಯುತ್ತಿದ್ದ ಸಾಹಿತ್ಯ ಐಕ್ಯತೆ, ಸೋದರತೆ, ಒಗ್ಗೂಡಿಸುವಿಕೆ ಮಂತ್ರವನ್ನು ಜಪಿಸಿದರು. ಇದರ ಪ್ರತಿಫಲವೇ ಸ್ವಾತಂತ್ರ್ಯ. ಕನ್ನಡ ಭಾಷೆಯ ಅಸ್ಮಿತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶೇಶ್ವರಯ್ಯ, ಸರ್.ಮಿರ್ಜಾಇಸ್ಮಾಯಿಲ್, ಬಿ.ಎಂ.ಶ್ರೀಕಂಠಯ್ಯನವರ ಕೊಡುಗೆ ಅಪಾರವಾಗಿದೆ ಎಂದರು.
ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಡಾ.ಉಮೇಶ್‍ಬಾಬು ಮಠದ್ ದಿನದ ಮಹತ್ವವನ್ನು ಕುರಿತು ಮಾತನಾಡಿದರು.
ಕ.ಸಾ.ಪ. ಜಿಲ್ಲಾ ಗೌರವ ಕಾರ್ಯದರ್ಶಿ ಹಾಗೂ ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಮುಖ್ಯಶಿಕ್ಷಕ ರಂಗಾನಾಯ್ಕ್, ಸಂಘಟನಾ ಕಾರ್ಯದರ್ಶಿ ವಿ.ಧನಂಜಯ, ಚಿತ್ರಕಲಾ ಕಾಲೇಜು ಪ್ರಾಚಾರ್ಯ ಕಣ್ಮೇಶ್, ರಂಗಕಲಾವಿದ ಎಂ.ಕೆ.ಹರೀಶ್, ಶ್ರೀನಿವಾಸ್ ಮಳಲಿ, ಚನ್ನಬಸಪ್ಪ, ಉಪನ್ಯಾಸಕ ಶಿವಕುಮಾರ್ ಉಪಸ್ಥಿತರಿದ್ದರು.