ಚಿತ್ರದುರ್ಗ, (ಜೂ.26) : ಶ್ರೀ ಮುರುಘಾಮಠದಲ್ಲಿ ಮುಂಜಾನೆ ಬಸವಪ್ರಭು ಸ್ವಾಮೀಜಿ ಕರ್ತೃಶ್ರೀ ಗುರು ಮುರುಘೇಶನಿಗೆ ಪೂಜೆಯನ್ನು ಸಲ್ಲಿಸಿ ಮೌನವನ್ನು ಸಮಾಪ್ತಿ ಮಾಡಿದರು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಬಸವಪ್ರಭು ಸ್ವಾಮೀಜಿ, ಮಠದ ಸಂಕಷ್ಟಗಳ ನಿವಾರಣೆಗಾಗಿ ಒಂದು ದಿನದ ಮೌನಾಚರಣೆ ಮಾಡಲಾಯಿತು. ಮೌನ ಒಂದು ದೊಡ್ಡ ಶಕ್ತಿ. ಅದು ನಮ್ಮೊಳಗಿರುವ ಇಚ್ಛಾಶಕ್ತಿಯನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಅಸಾಧ್ಯವಾದ ಕಾರ್ಯವನ್ನು ಸಾಧ್ಯ ಮಾಡಲು ಮೌನ ಒಂದು ಶಕ್ತಿಯಾಗಿ ನಮಗೆ ಕಾರ್ಯಗಳನ್ನು ಸಾಧಿಸಲು ಸ್ಪೂರ್ತಿಯನ್ನು ನೀಡುತ್ತದೆ.
ಹಾಗಾಗಿ ಜೀವನದಲ್ಲಿ ಪ್ರತಿಯೊಬ್ಬರೂ ಮೌನವಾಗಿರುವ ಅಭ್ಯಾಸವನ್ನು ಮಾಡಬೇಕು. ವಿದ್ಯಾರ್ಥಿಗಳು ನೀವು ಸಮಯ ಸಿಕ್ಕಾಗ ಸ್ವಲ್ಪ ಸಮಯ ಮೌನವಾಗಿರುವ ಪದ್ಧತಿಯನ್ನು ಅಳವಡಿಸಿಕೊಂಡರೆ ನಿಮಗೆ ಏಕಾಗ್ರತೆ ಹೆಚ್ಚುತ್ತದೆ. ಅಷ್ಟೇ ಅಲ್ಲದೇ ನಿಮಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿ ಚೆನ್ನಾಗಿ ಓದುವ ಅಭಿರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮೌನ ಜೀವನದ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಔಷಧಿಯಾಗಿದೆ ಎಂದರು.
ಈ ಸಂಧರ್ಭದಲ್ಲಿ ವಕೀಲರಾದ ಪ್ರತಾಪ್ ಜೋಗಿಯವರು ಸ್ವಾಮೀಜಿಯವರ ಮೌನ ಸಮಾಪ್ತಿ ಮಾಡಿದ ನಂತರ ಶ್ರೀಮಠದ ವಿದ್ಯಾರ್ಥಿಗಳಿಗೆ ಮಾವಿನ ಹಣ್ಣುಗಳನ್ನು ಹಂಚಿದರು. ಪೂಜ್ಯರಿಗೆ ಗೌರವ ಸಲ್ಲಿಸಿದರು.
ಸಮಾರಂಭದಲ್ಲಿ ಬಸವಾದಿತ್ಯ ದೇವರು, ಮುರುಗೇಂದ್ರ ಸ್ವಾಮೀಜಿ, ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಗುರುಕುಲದ ಸಾಧಕರು ಇದ್ದರು.